ಉಡುಪಿ: ಠಾಣೆಗಳಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆ, ದೂರುಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅವರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ಉಪವಿಭಾಗದ ಠಾಣೆಗಳ ಪೈಕಿ ಮಾದರಿ ಠಾಣೆಯನ್ನಾಗಿ ಕಾಪು, ಪಡುಬಿದ್ರಿ ಹಾಗೂ ಕಾರ್ಕಳ ನಗರ ಠಾಣೆಯನ್ನು ಆಯ್ಕೆ ಮಾಡಲಾಗಿದೆ.
ಕಳೆದ ಮೂರು ತಿಂಗಳುಗಳಿಂದ ಸದ್ರಿ ಠಾಣೆಗಳಲ್ಲಿನ ಆಂತರಿಕ ಕೆಲಸ ಕಾರ್ಯ, ನೋಂದಣಿ ಪುಸ್ತಕಗಳ ಜೋಡಣೆ ಮತ್ತು ನಿರ್ವಹಣೆ ಹಾಗೂ ಠಾಣೆಯ ಒಳಗೆ ಹಾಗೂ ಬಾಹ್ಯ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸಿ ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಮೂರೂ ಪೊಲೀಸ್ ಠಾಣೆಗಳನ್ನು ಗುಣಮಟ್ಟ ಪರಿಶೀಲನಾ ಸಮತಿಯು ಪರಿಶೀಲಿಸಿ ಐಎಸ್ಒ 9001:2008ರಂತೆ ಮಾದರಿ ಠಾಣೆಗಳನ್ನಾಗಿ ಪರಿಗಣಿಸಿ ಪ್ರಮಾಣಪತ್ರವನ್ನು ನೀಡಿರುತ್ತಾರೆ.
ಪೊಲೀಸ್ ಮಹಾ ನಿರೀಕ್ಷಕರು ಕಾರ್ಕಳ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ ಐಎಸ್ಒ ಪ್ರಮಾಣ ಪತ್ರವನ್ನು ಕಾಪು, ಪಡುಬಿದ್ರಿ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಿಗೆ ನೀಡಿರುತ್ತಾರೆ.






