ಮೂಡುಬಿದಿರೆ : ತಾನು ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ 43 ಹೊಸ ತಾಲೂಕು ರಚನೆಗೆ ಅನುದಾನ ಸಹಿತ ಘೋಷಣೆಯನ್ನು ಮಾಡಿದ್ದು ಅದನ್ನು ಈಗ ಆಡಳಿತದಲ್ಲಿರುವ ಸಿದ್ಧರಾಮಯ್ಯ ಸರಕಾರ ತಡೆಹಿಡಿಯುವ ಮೂಲಕ ಜನರಿಗೆ ಮೋಸ ಮಾಡಿದೆ ಅಲ್ಲದೆ ಪ್ರತಿಯೊಂದು ತಾಲೂಕಿಗೂ 2ಕೋಟಿಯಂತೆ ಒಟ್ಟು 86ಕೋಟಿ ರೂವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದು ಆ ಅನುದಾನ ಏನಾಯಿತು..?ಎಂದು ರಾಜ್ಯದ ಮಾಜಿ ಮುಖ್ಯ ಮಂತ್ರಿ ಪ್ರಶ್ನಿಸಿದ್ದಾರೆ.

ಅವರು ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಮಂಡಲ ಮತ್ತು ಬಿಜೆಪಿ ಹಿಂದುಳಿದ ವರ್ಗ ಮೋರ್ಛಾ ನೇತೃತ್ವದಲ್ಲಿ ಶುಕ್ರವಾರ ಮೂಡುಬಿದಿರೆಯ ತಹಶೀಲ್ದಾರ್ ಕಛೇರಿಯ ಬಳಿ ಮೂಡುಬಿದಿರೆ ತಾಲೂಕು ರಚನೆಗೆ ಆಗ್ರಹಿಸಿ ನಡೆಸಿದ ಬೃಹತ್ ಹಕ್ಕೋತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೊಸ ತಾಲೂಕುಗಳನ್ನು ರಚಿಸುವಂತೆ ಈ ಹಿಂದೆ ವಾಸುದೇವನ್ ಸಮಿತಿ, ಹುಂಡೇಕರ್ ಸಮಿತಿ, ಗದ್ದೀಗೌಡರ್ ಅವರು ಎಂ.ಬಿ.ಪ್ರಕಾಶ್ ಅವರ ನೇತೃತ್ವದ ಕಮಿಟಿಗಳು ವರದಿಕೊಟ್ಟಿದ್ದವು ಆದರೆ ಈ ಹಿಂದಿನ ಯಾವುದೇ ಸರಕಾರಗಳು ತಾಲೂಕು ಮಾಡುವ ಬಗ್ಗೆ ಯೋಚನೆಯನ್ನು ಮಾಡಿರಲಿಲ್ಲ ಆದರೆ ತಮ್ಮ ಸರಕಾರವು ಆಡಳಿತವಿಕೇಂದ್ರಿಕರಣಗೊಂಡು ಜನರಿಗೆ ಅಧಿಕಾರಿಗಳು ನೇರವಾಗಿ ಸೌಲಭ್ಯಗಳು, ಅಧಿಕಾರಿಗಳು ಸಿಗಬೇಕು ಎಂಬ ದೃಷ್ಠಿಯಿಂದ ತಾಲೂಕುಗಳ ಘೋಷಣೆಯನ್ನು ಮಾಡಲಾಗಿದೆ ಆದರೆ ಕಾಂಗ್ರೆಸ್ ಸರಕಾರವು ತಾಲೂಕು ಘೋಷಣೆ ಮಾಡಿದರೆ ಅದರ ಲಾಭ ಬಿಜೆಪಿ ಸರಕಾರಕ್ಕಿ ಲಭಿಸುತ್ತದೆ ಎಂಬ ಉದ್ದೇಶದಿಂದ ತಾಲೂಕು ಸಹಿತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಅಲ್ಲದೆ ಅನುದಾನವನ್ನು ಬಿಡುಗಡೆಗೊಳಿಸುತ್ತಿಲ್ಲವೆಂದು ಆರೋಪಿಸಿದರು.
ಬಡವರ ಪರವಾದ ಸರಕಾರ ಎಂದು ಹೇಳುತ್ತಿರುವ ಸಿದ್ಧರಾಮಯ್ಯ ಸರಕಾರವು ರಾಜ್ಯದಲ್ಲಿ 32ಲಕ್ಷ ಮತ್ತು ಜಿಲ್ಲೆಯಲ್ಲಿ 1ಲಕ್ಷ ಬಡಜನರ ಪಡಿತರ ಚೀಟಿಯನ್ನು ರದ್ದು ಪಡಿಸುವ ಮೂಲಕ ಬಡವರ ಅನ್ನಭಾಗ್ಯಕ್ಕೆ ಕನ್ನ ಹಾಕಿದೆ ಎಂದು ಹೇಳಿದ ಅವರು ಡಿ9ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅಧಿಕೃತ ಘೋಷಣೆ ಮಾಡಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮೂಡುಬಿದಿರೆಯನ್ನು ತಾಲೂಕಾಗಿ ಘೋಷಣೆ ಮಾಡುವಂತೆ ಇಲ್ಲಿನ ಶಾಸಕ ಅಭಯಚಂದ್ರ ಅವರು ಅಂದು ಪಟ್ಟು ಹಿಡಿದಿದ್ದರು ಆದರೆ ಇಂದು ಅವರದ್ದೇ ಸರಕಾರವಿದೆ, ಸಚಿವರಾಗಿದ್ದಾರೆ ದಿನದ 24 ಗಂಟೆಯೊಳಗೆ ತಾಲೂಕು ಆದೇಶ ಹೊರಡಿಸುವ ಅಧಿಕಾರ ಇವರಲ್ಲಿದೆಯಲ್ಲ ಇವಾಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ರಾಜ್ಯದಲ್ಲಿ 369000ದಷ್ಟು ಆಶ್ರಯ ಮನೆಗಳಿಗೆ ನಿರ್ಮಾಣ ಹಂತದಲ್ಲಿದ್ದು ಸರಕಾರದ ನಿರ್ಲಕ್ಷ್ಯದಿಂದಾಗಿ ಅನುದಾನ ಬಿಡುಗಡೆಯಾಗಿಲ್ಲ ಇದರಿಂದಾಗಿ ಜನರು ಮಳೆಯಲ್ಲಿ ನೆನೆದು ಅನಾರೋಗ್ಯ ಪೀಡಿತರಾಗಿದ್ದಾರೆ ಈ ಬಗ್ಗೆ ವಸತಿ ಸಚಿವ ಅಂಬರೀಷ್ ಅವರಲ್ಲಿ ಪ್ರಶ್ನಿಸಿದರೆ ಅವರಲ್ಲಿ ಉತ್ತರ ಸಿಗುತ್ತಿಲ್ಲ ಇದನ್ನೆಲ್ಲಾ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸತ್ತಿದೆ ಎಂಬುದಕ್ಕೆ ಎರಡು ಮಾತಿಲ್ಲ ಎಂದು ಹೇಳಿದರು.
ಸಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ ಮೂಡುಬಿದಿರೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸಿಂಥೆಟಿಕ್ ಟ್ರ್ಯಾಕ್ಗೆ ಬಿಜೆಪಿ ಸರಕಾರವಿದ್ದಾಗ ಇದ್ದ ಕ್ರೀಡಾ ಮಂತ್ರಿ ಅಪ್ಪಚ್ಚು ರಂಜನ್ ಅನುದಾನವನ್ನು ನೀಡಿದ್ದು ಅಲ್ಲದೆ ಮೂಡುಬಿದಿರೆ ಯುಜಿಡಿಗೆ ಕೂಡಾ ಬಿಜೆಪಿ ಸರಕಾರ ಮನವಿ ಸಲ್ಲಿಸಿತ್ತು ಅಲ್ಲದೆ ತಾಲೂಕು ರಚನೆಗೂ ಕೂಡಾ ಬಿಜೆಪಿ ಆಗ್ರಹಿಸಿತ್ತು ಇದೀಗ ತಾಲೂಕು ಆದೇಶ ಹೊರಡಿಸುವಂತೆ ಕ್ಷೇತ್ರದ ಶಾಸಕ, ಸಚಿವ ಅಭಯಚಂದ್ರ ಅವರಿಗೆ ಭಾರತೀಯ ಜನತಾ ಪಾರ್ಟೀ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದು ಮೂಡುಬಿದಿರೆಯ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಿ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಂಹ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷರಾದ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಬಿಜೆಪಿ ಮೋರ್ಛಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ರಾಜ್, ಕ್ಷೇತ್ರಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮುಖಂಡರುಗಳಾದ ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್, ಕೃಷ್ಣರಾಜ ಹೆಗ್ಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂ.ವ.ಮೋರ್ಚದ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಸ್ವಾಗತಿಸಿದರು. ಕಿಶೋರ್ ಪೆರ್ಮಜೆ ಮನವಿಯನ್ನು ವಾಚಿಸಿದರು ಎನ್.ಪಿ.ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಪೂಜಾರಿ ವಂದಿಸಿದರು.
ಬಾಕ್ಸ್ :
ಜನರಿಗೆ ಬೇಡವಾದರೆ ನಿಡ್ಡೋಡಿ ಕೈ ಬಿಡಲಿ : ನಿಡ್ಡೋಡಿಯಲ್ಲಿ ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರ ತಮ್ಮ ಕೊಡುಗೆ ಎಂಬ ಬಗ್ಗೆ ಆರೋಪವಿದೆ ಎಂದು ಪತ್ರಕರ್ತರು ಶೆಟ್ಟರ್ ಅವರ ಗಮನಕ್ಕೆ ತಂದಾಗ ಜನರಿಗೆ ಅಗತ್ಯವಿರುವ ಯೋಜನೆ ತಮ್ಮ ಬಳಿಗೆ ಬಂದಾಗ ಅದಕ್ಕೆ ಸ್ಪಂದಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವುದಾಗಿ ಒಪ್ಪಿದ ಶೆಟ್ಟರ್ ಕೂಡ್ಲಿಗಿ ಯೋಜನೆಯ ಬಗ್ಗೆಯೂ ಮೊದಲಿಗೆ ವಿರೋಧವಿತ್ತು ನಂತರ ಜನರ ಸಹಕಾರ ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಗಳನ್ನು ಅಂದಿನ ಕೇಂದ್ರ ಸರಕಾರ ಕೈ ಬಿಡಬಹುದಿತ್ತು. ತಾವು ಘೋಷಿಸಿರುವ ತಾಲೂಕನ್ನು ಕೈ ಬಿಟ್ಟಿರುವ ರಾಜ್ಯ ಸರಕಾರಕ್ಕೆ ನಿಡ್ಡೋಡಿ ಯೋಜನೆಯನ್ನು ಕೈ ಬಿಡಲು ಅವಕಾಶವಿದೆ. ಜನರ ಅಭಿಪ್ರಾಯ ಸಂಗ್ರಸಿ ಸರಕಾರಕ್ಕೆ ಕಳುಹಿಸಿ ಕೊಡಲಿ ಎಂದ ಅವರು ದೂಷಣೆ ಮಾಡುವುದು ಸರಿಯಲ್ಲ ಎಂದರು.


