ಸುದ್ದಿ9ಮಂಗಳೂರು:ಬಂಟ್ವಾಳ ತಾಲೂಕಿನ ಜುಮಾದಿಗುಡ್ಡೆ ಗಣಪತಿ ಕಟ್ಟೆಯ ಹಿಂದೂ ಸೇವಾ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯಲ್ಲಿ ನ.23ರಂದು “ತುಳುನಾಡ್ಡ್ ಕೃಷಿ ಕ್ರಾಂತಿ” ಎಂಬ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ರಾಜೇಶ್ ನಾಕ್ ಉಳೇಪಾಡಿಗುತ್ತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ನಡೆಯದೆ ಬರಡಾಗಿರುವ ಭೂಮಿಯನ್ನು ಗುರುತಿಸಿ ಸಂಘಟನೆಗಳನ್ನು ಕೃಷಿ ಕಾರ್ಯದಲ್ಲಿ ತೊಡಗುವಂತೆ ಮಾಡಿ ನಮ್ಮ ಕೃಷಿ ಸಂಸ್ಕ್ರತಿಯನ್ನು ಉಳಿಸುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ರಹ್ಮರಕೂಟ್ಲು ಸಮೀಪದ 5.5 ಎಕರೆ ಜಾಗವನ್ನು ಗುರುತಿಸಿ ಉಳುಮೆ ಮಾಡಿ ಬಿತ್ತನೆಕಾರ್ಯ ನಡೆದಿದೆ. 23ರಂದು ಗದ್ದೆಯಲ್ಲಿ ನೇಜಿ ನೇಡಲಾಗುತ್ತದೆ. ಇಲ್ಲಿ ಸಾವಯವ ಗೊಬ್ಬರವನ್ನೆ ಬಳಸಿ ಬೇಸಾಯ ಮಾಡುವುದರಿಂದ ಇಲ್ಲಿ ಬೆಳೆಯುವ ಭತ್ತಕ್ಕೆ ಈಗಾಗಲೇ ಬೇಡಿಕೆ ಬಂದಿದೆ. ಇದು ಇತರ ಪ್ರದೇಶಗಳಿಗೆ ವಿಸ್ತರಣೆಯಾಗಿ ಇದೊಂದು ಮಾದರಿ ಕಾರ್ಯಕ್ರಮವಾಗಬೇಕೆಂದು ಅವರು ತಿಳಿಸಿದರು.
ಬಿಎಸ್ವೈ ಉದ್ಘಾಟನೆ:ಸಂಸದ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಶೋಬಾ ಕರಂದ್ಲಾಜೆ ಮುಂತಾದವರು ಭಾಗವಹಿಸಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದ ಬಳಿಕ ಪ್ರತಿ ವರ್ಷದಂತೆ ನಡೆಯುವ ಕೆಸರ್ಡ್ ಒಂಜಿ ದಿನ ಎನ್ನುವ ಗ್ರಾಮೀಣ ಕ್ರೀಡೆ ಸಂಜೆವರೆಗೆ ನಡೆಯಲಿದೆ ಎಂದು ಪುರುಷೋತ್ತಮ ಭಂಡಾರಿ ತಿಳಿಸಿದರು.
ಹಿಂದೂ ಸೇವಾ ಸಂಘದ ಮಹೇಶ್ ಶೆಟ್ಟಿ,ದಿವಾಕರ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

