ಮಂಗಳೂರು: ವಿಜಯ ಕರ್ನಾಟಕ ದಿನಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿದ್ದ ಯು.ಕೆ. ಕುಮಾರ್‌ನಾಥ್ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ , ಸಂಸ್ಥೆಯ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಶನಿವಾರ ಬೆಳಗ್ಗೆ ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ ನಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಪತ್ರಕರ್ತರ ಜೀವನಕ್ಕೆ ನಿವೃತ್ತಿ ಇಲ್ಲ, ಅದೇ ರೀತಿ ನನ್ನ ಜೀವನವೂ ಹರಿಯುವ ನದಿಯಂತೆ ಎಂಬ ಕುಮಾರ್ ನಾಥ್ ಅವರ ಮಾತಿನಂತೆ ವಿದಾಯ ಸಮಾರಂಭ ಎಲ್ಲೂ ಕೂಡಾ ವಿದಾಯ ಕೂಟವಾಗಿರದೆ ಬೀಳ್ಕೊಡುಗೆಯನ್ನು ಸಂಭ್ರಮ ಸಂತಸದೊಂದಿಗೆ ಹಂಚಿಕೊಳ್ಳಲಾಯಿತು.
ವಿಜಯ ಕರ್ನಾಟಕ ಮಂಗಳೂರು‌ ವಿಭಾಗ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ, ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಮುಖ್ಯ ಪ್ರಬಂಧಕ‌ ಕದ್ರಿ ನವನೀತ ಶೆಟ್ಟಿ, ಜಾಹೀರಾತು ವಿಭಾಗ ಮುಖ್ಯಸ್ಥ ರಾಮಕೃಷ್ಣ ಡಿ., ಪ್ರಸರಣ ವಿಭಾಗದ ನಾರಾಯಣ, ಪ್ರಿಂಟಿಂಗ್ ವಿಭಾಗದ ಗಿರೀಶ್ ಭಟ್ ಹಾಗೂ ಕುಮಾರ್ ನಾಥ್ ಪತ್ನಿ ಆಶಾ ಕುಮಾರ್ ನಾಥ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕುಮಾರ್ ನಾಥ್ ಅವರ ಒಡನಾಟದ ಕುರಿತಾಗಿ ಪತ್ರಕರ್ತರಾದ ಆರ್.ಸಿ. ಭಟ್ ಸುಳ್ಯ, ಸುಧಾಕರ ಸುವರ್ಣ ಪುತ್ತೂರು, ಮಹಮ್ಮದ್ ಆರಿಫ್ ಪಡುಬಿದ್ರೆ, ಗಂಗಾಧರ್ ಕಾಸರಗೋಡು, ಜಾನ್ ಡಿಸೋಜ ಕುಂದಾಪುರ, ವಿಜಯ್ ಕೋಟ್ಯಾನ್ ಪಡು, ರಾಜೇಶ್ ಕಿಣಿ, ಕದ್ರಿ ನವನೀತ ಶೆಟ್ಟಿ, ರಾಮಕೃಷ್ಣ ಡಿ., ದಿನೇಶ್ ಹೊಳ್ಳ , ರವಿ ಪೊಸವಣಿಕೆ ಹಾಗೂ ಸೀತಾರಾಮ ಆಚಾರ್ಯ ಮೂಡುಬಿದಿರೆ ಕುಮಾರ್ ನಾಥ್ ಅವರ ಒಡನಾಟ ಹಾಗೂ ವೃತ್ತಿ ಬದುಕಿನ ಅನುಭವ ಕಥನ ಬಿಚ್ಚಿದರು.

ನಮ್ಮ ಕುಡ್ಲದ ನಿರೂಪಕ ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಆಂಟನಿರಾಜ್ ಸುಳ್ಯ ಹಾಗೂ ರಾಜೇಶ್ ಕಿಣಿ ಸಿನಿಮಾ ಗೀತೆ ಹಾಡುವ ಮೂಲಕ‌ ರಂಜಿಸಿದರು.


ನಾನು ಯಾವತ್ತಿದ್ದರೂ ಸ್ವತಂತ್ರ ಜೀವಿಯಾಗಿ ಬದುಳಿದವ. ಬಾಲ್ಯದಿಂದಲೇ ಬದುಕಿನಲ್ಲಿ ಬಹಳಷ್ಟು ಏರಿಳಿತ ಕಂಡವನು. ಇಷ್ಟಪಟ್ಟ ಬಹಳಷ್ಟು‌ ಕ್ಷೇತ್ರದಲ್ಲಿ ದುಡಿದ ಅನುಭವ ಸಿಕ್ಕಿತ್ತು, ಯಾವುದೂ ಶಾಶ್ವತವಾಗಿರಲಿಲ್ಲ. ಮಂಗಳೂರಿನಲ್ಲಿಯೂ ಬೇರೆ ಬೇರೆ ಪತ್ರಿಕೆ ದುಡಿದ ಅನುಭವ ಇತ್ತು. ಉಡುಪಿಯ ಖ್ಯಾತ ಕಲಾವಿದರಾಗಿದ್ದ ನನ್ನ ಅಪ್ಪ ಕೃಷ್ಣಪ್ಪ‌ ಪೈಂಟರ್ ಅವರ ಮಗ ಎಂಬ ಕಾರಣದಿಂದ ವಸಂತ ಪಲಿಮಾರ್ ಅವರಿಂದಾಗಿ ವೃತ್ತಿ ಬದುಕಿನ ತಿರುವು ಸಿಕ್ಕಿತು, ಹಾಗಾಗಿ ಅವರು ಸದಾ ಸ್ಮರಣೀಯ. ಪತ್ರಿಕಾ ಜೀವನದಲ್ಲಿ ಬಹಳಷ್ಟು ಪತ್ರಿಕೆ, ಹಲವು ವಿಭಾಗದಲ್ಲಿ ದುಡಿದ ಅನುಭವ ಇದೆ.

ಯಾವುದೇ ಪತ್ರಿಕೆಯಲ್ಲಿದ್ದರೂ ಯಾವುದೇ ಸಿದ್ಧಾಂತದ ಬಗ್ಗೆ ನಾವು ನಂಬಿಕೆ ಇಟ್ಟುಕೊಂಡಿಲ್ಲ. ಬಾಂಬೆಯಲ್ಲಿ ಐದೇ ಮಂದಿ ಪತ್ರಿಕೆ ಕಟ್ಟಿದ ಪಾಡು ಹೇಳತೀರದು. ಈಗ ಮೂವತ್ತು ಸಾವಿರ ಪ್ರಸರಣ ಸಂಖ್ಯೆ ಇದೆ. ಬಳಿಕ ಉದಯದೀಪ, ಸಂಜೆ ದೀಪ ಪತ್ರಿಕೆ ಕಟ್ಟಿದೆವು. ಮಂಗಳೂರಿಗೆ ಬಂದು ಎರಡು ಪತ್ರಿಕೆ ಅನುಭವ ಆಯಿತು.

ಮೂವತ್ತ ಮೂರುವರೆ ವರ್ಷ ಪತ್ರಿಕಾ ವೃತ್ತಿ ಜೀವನ‌ ಅನುಭವವಾದರೆ ವಿಜಯ ಕರ್ನಾಟಕ ಒಂದು ಪತ್ರಿಕೆಯಲ್ಲೇ ಇಪ್ಪರೆಡೂವರೆ ವರ್ಷ ಅನುಭವ ಸಿಕ್ಕಿದೆ. ಯಾರದ್ದೇ ಆದರೂ ಬದುಕು ಎಂಬುದು ಕಾಲವನ್ನು ನಿರ್ಧರಿಸಿದೆ ಎಂದು ನಂಬಿದವ ನಾನು. ನಾವು ಒಂದು ಕಡೆ ಎಷ್ಟು ವರ್ಷ ಕಳೆದರೂ ನಮ್ ಲೈಫ್ ಲೈವ್ ಆಗಿರಬೇಕು. ಹಾಗಾಗಿ ಎಲ್ಲರೂ ತಮ್ಮ ತಮ್ಮ ವೃತ್ತಿಗೆ ನ್ಯಾಯ ಕೊಡುವುದರಿಂದ ಯಶಸ್ಸು ಸಾಧ್ಯ.
ಯು.ಕೆ. ಕುಮಾರ್ ನಾಥ್ ನಿವೃತ್ತ ಹಿರಿಯ ಸಹಾಯಕ ಸಂಪಾದಕ ವಿಜಯ ಕರ್ನಾಟಕ

By suddi9

Leave a Reply

Your email address will not be published. Required fields are marked *