ಕೊಣಾಜೆ: ಕ್ರೀಡೆ, ಕಲೆ ಹಾಗೂ ಸಮಾಜಮುಖಿ ಸೇವೆಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನೂತನ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ, ಪ್ರತಿಷ್ಠಿತ ಸಂಘವಾಗಿರುವ ಯುವಕ ಮಂಡಲ ನರಿಂಗಾನದ ಆಶ್ರಯದಲ್ಲಿ ಯುವಕ ಮಂಡಲದ ಸುಸಜ್ಜಿತ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿ ದಿ. ವಿಶ್ವನಾಥ ಶೆಟ್ಟಿ ಮೋರ್ಲ ಟ್ರೋಫಿ ಹಾಗೂ ನಗದು ರೂ. 10,022ನ್ನು ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ಹಾಗೂ ದ್ವಿತೀಯ ಪ್ರಶಸ್ತಿ ದಿ. ಶ್ಯಾಮ್ ಶೆಟ್ಟಿ ಗರೋಡಿ ಟ್ರೋಫಿ ಹಾಗೂ ನಗದು ರೂ. 7,022ನ್ನು ಬೀರಿ ಫ್ರೆಂಡ್ಸ್ ಕ್ಲಬ್ ಗೆದ್ದುಕೊಂಡಿತು.
ತೃತೀಯ ಪ್ರಶಸ್ತಿ ದಿ. ಬಾಲಕೃಷ್ಣ ಅಡಪ ಬಲೆತ್ತೋಡು ಟ್ರೋಫಿ ಹಾಗೂ ನಗದು ರೂ. 4022ನ್ನು ಕೆಎ-21 ಪುತ್ತೂರು ತಂಡ ಹಾಗೂ ಚತುರ್ಥ ಪ್ರಶಸ್ತಿ ದಿ. ರಘು ಆಳ್ವ ಗರೋಡಿ ಟ್ರೋಫಿ ಹಾಗೂ ನಗದು ರೂ. 4022ನ್ನು ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ -ಬಿ ತಂಡ ಗೆದ್ದುಕೊಂಡಿತು.
ಫೈನಲ್ ಹಣಾಹಣಿಯಲ್ಲಿ ಮೊದಲ ಸೆಟ್ ಬಿಎಫ್ ಸಿ ಬೀರಿ ತಂಡ ಗೆದ್ದುಕೊಂಡರೂ ಎರಡನೇ ಹಾಗೂ ಮೂರನೆಯ ಸೆಟ್ ನಲ್ಲಿ ಕೈರಂಗಳ ತಂಡ ಪಾರಮ್ಯ ಮೆರೆಯಿತು. ಮೂರನೆಯ ಸೆಟ್ ನಲ್ಲಿ ಮೊದಲ ಹಂತದಲ್ಲಿ ಕೈರಂಗಳ ತಂಡ ದೊಡ್ಡ ಅಂತರದ ಜಯ ಸಾಧಿಸುತ್ತದೆ ಎಂಬುದು ದೃಢವಾಗುತ್ತಿದ್ದಂತೆಯೇ ಎಚ್ಚೆತ್ತ ಬೀರಿ ತಂಡದ ದಿಢೀರ್ ಚೇತರಿಕೆಯ ಆಟ ಆಡಿದ್ದರಿಂದ ಇನ್ನಷ್ಟು ರೋಚಕತೆ ಸೃಷ್ಟಿಸಿತ್ತು. ಅಂತಿಮ ಕ್ಷಣದವರೆಗೆ ಕತ್ತಿಯ ಮೇಲಿನ ನಡಿಗೆಯಂತಿತ್ತು ಫಲಿತಾಂಶ. ಬೀರಿ ತಂಡದ ಯುವ ಪ್ರತಿಭೆ, ಗಜಗಾತ್ರದ ಹೊಡೆತಗಾರ ಡಿಕ್ಸನ್, ಆಲ್ ರೌಂಡರ್ ಮಧು, ಪಾಸರ್ ಜಯವರ್ಧನ್, ಅನ್ವರ್ ಹಾಗೂ ರಜತ್, ಎದುರಾಳಿಗಳ ಹೊಡೆತಕ್ಕೆ ಭದ್ರಕೋಟೆಯಂತಿದ್ದ ಅನುಭವಿ ಹಿರಿಯ ಆಟಗಾರ ವಿವೇಕ್ ಶಕ್ತಿ ಮೀರಿ ಹೋರಾಟ ನಡೆಸಿದರೂ, ಒಂದು ಹಂತದಲ್ಲಿ ಹಿಂದಿನ ಎರಡು ಸೆಟ್ ನಲ್ಲಿ ಆಡಿದಷ್ಟೇ ಸಮರ್ಥವಾಗಿ ಆಡಿದರೂ ಕಟ್ಟಕಡೆಗೆ ಸೋಲೊಪ್ಪಿಕೊಂಡಿತು.
ಬೀರಿ ತಂಡ ಸೆಮಿಫೈನಲ್ ಸೇರಿದಂತೆ ಸತತ ಐದು ಸೆಟ್ ನಿರಂತರ ಆಡಿದ್ದರಿಂದ ಆರನೆಯ ಸೆಟ್ ನಲ್ಲಿ ಸಂಪೂರ್ಣ ಬಳಲಿದ್ದರು. ಹಾಗೆಯೇ 25ರ ಎರಡು ಸೆಟ್ ನಿಂದಾಗಿ ಆಟಗಾರರು ಇನ್ನಷ್ಟು ಬಳಲಿದ್ದು, ಸ್ವಲ್ಪ ವಿಶ್ರಾಂತಿ ಬೇಕಿತ್ತು ಎಂಬುದು ಸೇರಿದ ಎಲ್ಲ ಕ್ರೀಡಾಪ್ರೇಮಿಗಳ ಮನದಾಳದ ಮಾತಾಗಿದ್ದರೂ ತೀರ್ಪುಗಾರರು ಅದಾಗಲೇ ಪಂದ್ಯ ಇನ್ನಷ್ಟು ವಿಳಂಬ ಮಾಡಿದರೆ ಪ್ರೇಕ್ಷಕರಿಗೆ ನಿರಾಸೆ ಆಗುತ್ತದೆ ಎಂಬುದನ್ನು ಮನದಟ್ಟು ಮಾಡಿದ್ದರಿಂದ ಬೀರಿ ತಂಡ ಆಟದಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಇನ್ನು ಶ್ರೀಕೃಷ್ಣ ಗೇಮ್ಸ್ ಕ್ಲಬ್ ಎರಡನೆಯ ಸೆಟ್ ಗೆದ್ದರೆ ಮೂರನೆಯ ಸೆಟ್ ಗೆಲ್ಲದೆ ಬಿಡಲಾರೆವು ಎಂಬುದನ್ನು ಇಲ್ಲಿಯೂ ಗೆಲ್ಲುವ ಮೂಲಕ ಗೆದ್ದು ಸಾಬೀತು ಪಡಿಸಿದರು. ಆ ಮೂಲಕ ಕಳೆದ ಹಲವು ಪಂದ್ಯಗಳಲ್ಲಿ ಸೆಮಿಯಲ್ಲಿ ಸೋಲು ಕಾಣುತ್ತಿದ್ದ ಕೈರಂಗಳ ತಂಡ ಬಹು ದಿನಗಳ ನಂತರ ಗೆಲುವಿನ ರುಚಿ ಅನುಭವಿಸಿತು. ಆಟಗಾರರು, ತಂಡದ ಬೆಂಬಲಿಗರು ತುಂಬ ಖುಷಿ ಪಟ್ಟರು. ಅದರಲ್ಲೂ ಕೈರಂಗಳ ತಂಡದ ರಾಕಿಯ ಅದ್ಭುತ ಸರ್ವ್, ಹೊಡೆತ, ರಿಶಿಯ ಡಿಫೆನ್ಸ್ , ಬಲಭಾಗದಲ್ಲಿ ಶಕ್ತಿ ಮೀರಿ ಆಡಿದ ನಿಖಿಲ್ ಗಟ್ಟಿಯ ಸಮಯೋಚಿತ ಅರುಣ್, ಮಾಸ್ಟರ್ಸ್ ತಂಡದಲ್ಲೂ ಆಡಿದ ಅನುಭವ ಹೊಂದಿರುವ ಖಲೀಲ್ ಕೌಶಲ್ಯ, ಎಲ್ಲಕ್ಕಿಂತಲೂ ಮುಖ್ಯವಾಗಿ ಪಾಸರ್ ನಬೀಲ್ ಸಮಯೋಚಿತ ಆಟ ಅಟ್ಯಾಕರ್ ಗಳಿಗೆ ಆನೆ ಬಲ ತಂದು ಕೊಟ್ಟಿತ್ತು. ಆಸಿಫ್ ಒಕ್ಕೆತ್ತೂರು ಅನುಭವ ಕೂಡಾ ಕೆಲಸ ಮಾಡಿತು.
ರಾಕಿ ಹಾಗೂ ರಿಶಿ ಆಟದಲ್ಲಿ ಅಗ್ರೆಸ್ಸಿವ್ ಆಗಿ ಕಂಡರೂ ಮಾತಿಗಿಂತ ಕೃತಿಯಲ್ಲಿ ಹೆಚ್ಚು ಪ್ರಭಾವ ಬೀರಿದರು. ಬೀರಿ ತಂಡದ ತಡೆಗೋಡೆಯ ಮಧ್ಯೆಯೂ ಸಣ್ಣ ಸ್ಥಳಾವಕಾಶ ಸ್ವತಃ ನಿರ್ಮಿಸಿಕೊಟ್ಟ ನಬೀಲ್ ಪಾಸಿಂಗ್ ನಿರ್ವಹಣೆ ಹೊಡೆತಗಾರರಿಗೆ ಪ್ಲಸ್ ಆಯಿತು. ಕೈರಂಗಳ ತಂಡದ ಆಕ್ರಮಣಕಾರಿ ಆಟದ ಮುಂದೆ ಕಡೆಗೂ ಬೀರಿ ತಂಡ ಸೋಲೊಪ್ಪಿಕೊಂಡಿತು.
ಸೆಮಿಫೈನಲ್ ಪಂದ್ಯ ಕೂಡಾ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ತಂಡದ ನಿಖಿಲ್ ಗಟ್ಟಿ ಸವ್ಯಸಾಚಿ ಪ್ರಶಸ್ತಿ, ನಬಿಲ್ ಅತ್ಯುತ್ತಮ ಪಾಸರ್ ಹಾಗೂ ಬೀರಿ ಫ್ರೆಂಡ್ಸ್ ಕ್ಲಬ್ ತಂಡದ ಡಿಕ್ಸನ್ ಅತ್ಯುತ್ತಮ ಅಟ್ಯಾಕರ್ ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ದಕ್ಷ ಪೊಲೀಸ್ ಅಧಿಕಾರಿ ಎಸಿಪಿ ದಿನಕರ್ ಶೆಟ್ಟಿ ಪಡ್ರೆ ಸುರತ್ಕಲ್ ವಾಲಿಬಾಲ್ ಪಂದ್ಯಾವಳಿಯ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಟಗಾರರು ಕ್ರೀಡಾ ಸ್ಪೂರ್ತಿ ಮೆರೆಯುವಂತೆ ಹಾಗೂ ಸತ್ಯದ ದಾರಿಯಲ್ಲಿಯೇ ಪಂದ್ಯ ಆಡುವಂತೆ ಬುದ್ಧಿ ಮಾತು ಹೇಳಿದರು. ವಾಲಿಬಾಲ್ ಮಾಜಿ ರಾಷ್ಟ್ರೀಯ ತರಬೇತುದಾರ ಜಿ.ಎನ್. ಆಳ್ವ ಪಂದ್ಯಕ್ಕೆ ಚಾಲನೆ ನೀಡಿದರು. ಹಿರಿಯರಾದ ಲಿಂಗಪ್ಪ ಪೂಜಾರಿ ಸರ್ಕುಡೇಲು ಪಂದ್ಯ ಉದ್ಘಾಟಿಸಿದರು. ಉಳ್ಳಾಲ ತಾಲೂಕು ವಾಲಿಬಾಲ್ ಎಸೋಸಿಯೇಷನ್ ಅಧ್ಯಕ್ಷ ತ್ಯಾಗಂ ಹರೇಕಳ ಆಟಗಾರರಿಗೆ ಶಿಸ್ತು ಹಾಗೂ ಸಮಯ ಪರಿಪಾಲನೆ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಬಿಆರ್ ಪಿ ಲೋಕೇಶ್ ಸರ್ಕುಡೇಲು ಅಧ್ಯಕ್ಷತೆ ವಹಿಸಿದ್ದರು. ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ ಪಾದಲ್ಪಾಡಿ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ಜಗದೀಶ್ ನಾಯಕ್ ಮರಿಕಾಪು, ಪ್ರಧಾನ ಕಾರ್ಯದರ್ಶಿ ರಾಕೇಶ್ ಕೊರಕಟ್ಟ, ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಎಲ್. ಸರ್ಕುಡೇಲು, ಗೌರವಾಧ್ಯಕ್ಷ ನಿಕೋಲಸ್ ಮೊಂತೆರೋ, ಮಾಜಿ ಅಧಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ, ಮಾಜಿ ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ನರಿಂಗಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವಾಝ್ ಕೊಲ್ಲರಕೋಡಿ, ಯುವಕ ಮಂಡಲ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೋಸೆಫ್ ಕುಟ್ಟಿನ್ಹ ಬೋಳ, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಭಂಡಾರಮನೆ, ರೋಮ್ರಿಕ್ ಡಿಸೋಜ ಬೋಳ, ದಿ. ಶ್ಯಾಮ್ ಶೆಟ್ಟಿ ರಾಮೆರೆ ಗುತ್ತು ಗರೋಡಿ ಅವರ ಪುತ್ರ ಯುವ ಉದ್ಯಮಿ ಕಿಶೋರ್ ಶೆಟ್ಟಿ ಗರೋಡಿ, ದಿ. ರಘು ಆಳ್ವರ ಪುತ್ರ ನಿತಿನ್ ಆಳ್ವ ಗರೋಡಿ, ದಿ. ವಿಶ್ವನಾಥ ಶೆಟ್ಟಿ ಮೋರ್ಲ ಅವರ ಪುತ್ರ ಅಭಿಷೇಕ್ ಶೆಟ್ಟಿ ಮೋರ್ಲ, ಮಾಜಿ ಗೌರವಾಧ್ಯಕ್ಷ ವಿನೋದ್ ಸುವರ್ಣ ನಿಡ್ಮಾಡ್ ಹಾಗೂ ನಿಕಟಪೂರ್ವ ಅಧ್ಯಕ್ಷ ಗಿರೀಶ್ ಆಳ್ವ ಗರೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ವಿವಿಧ ಬಗೆಯಲ್ಲಿ ಸಹಕರಿಸಿದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾರೋಪದಲ್ಲಿ ಉಳ್ಳಾಲ ತಾಲೂಕು ವಾಲಿಬಾಲ್ ಎಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ ಪಾಲ್ಗೊಂಡು ಅದ್ದೂರಿ ಪಂದ್ಯಾಟ ಆಯೋಜನೆ, ಅಚ್ಚುಕಟ್ಟಾದ ವ್ಯವಸ್ಥೆ ಹಾಗೂ ಪಂದ್ಯಾಟದುದ್ದಕ್ಕೂ ಸಮಯ ಪರಿಪಾಲನೆಗೆ ಕೊಟ್ಟ ಮಹತ್ವದ ಕುರಿತು ಶ್ಲಾಘಿಸಿದರು.
ಅರುಣ್ ಶೆಟ್ಟಿ ಬಾಳೆಹೊನ್ನೂರು ಹಾಗೂ ಹನೀಫ್ ವೀಕ್ಷಕ ವಿವರಣೆ ನೀಡಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು ವಂದಿಸಿದರು. ಯುವಕ ಮಂಡಲದ ಹಿರಿಯ ಸದಸ್ಯ, ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
