ಬಂಟ್ವಾಳ: ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀಚಕ್ರ ಪೂಜೆ ಸಹಿತ ಶ್ರೀವಿಷ್ಣು ಸಹಸ್ರನಾಮ ಹೋಮ ಶುಕ್ರವಾರ ನೆರವೇರಿತು.
ಕಳ್ಳಿಗೆ ಮತ್ತು ತುಂಬೆ ಮಾತ್ರವಲ್ಲದೆ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಭಕ್ತರ ಗ್ರಾಮ ದೇವರು ದೇವಂದಬೆಟ್ಟು ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರೂ ೧ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಇದೇ ೨೦ರಂದು ಬೆಳಿಗ್ಗೆ ಗಂಟೆ ೮.೩೩ಕ್ಕೆ ದೇವರ ವಿಗ್ರಹಕ್ಕೆ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ದ್ರವ್ಯ ಮಿಲಿತ ಸಹಸ್ರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಇದೇ ವೇಳೆ ಇಲ್ಲಿನ ಪರಿವಾರ ದೇವರಿಗೆ ಕಲಶಾಭಿಷೇಕ ನಡೆಯಲಿದ್ದು, ಮಹರ್ಷಿವಾಣಿ ಖ್ಯಾತಿಯ ಆನಂದ ಗುರೂಜಿ ಭಾಗವಹಿಸಿ ಆಶೀರ್ವಚನ ನೀಡುವರು. ಮಧ್ಯಾಹ್ನ ೧ ಗಂಟೆಗೆ ದೇವರ ಬಲಿ ಉತ್ಸವ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ೨ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನತ್ತು ಸಂಜೆ ೫ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ತಿಳಿಸಿದ್ದಾರೆ.
ಸುಮಾರು ೮೦೦ ವರ್ಷಗಳ ಹಿನ್ನೆಲೆ ಹೊಂದಿರುವ ಈ ಕ್ಷೇತ್ರದಲ್ಲಿ ಗೋಶಾಲೆ ಆರಂಭ, ತಾಮ್ರ ಮತ್ತು ಗ್ರಾನೈಟ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದು, ಭಕ್ತರಿಂದ ಹೊರೆಕಾಣಿಕೆ ಹರಿದು ಬಂದಿದೆ. ಇಲ್ಲಿನ ಗರಿಷ್ಟ ಮಂದಿ ಭಕ್ತರು ಶ್ರಮದಾನ ನಡೆಸಿದ್ದು, ಅಖಂಡ ಭಜನೆ, ಪ್ರತಿದಿನ ಧಾರ್ಮಿಕ ಉಪನ್ಯಾಸ, ವಿಷ್ಣು ಸಹಸ್ರನಾಮ ಸಹಿತ ಹೋಮ, ಹವನ, ಶ್ರೀಚಕ್ರ ಪೂಜೆ, ಅಂಕುರ ಪೂಜೆ ನೆರವೇರಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಇಲ್ಲಿನ ವಿವಿಧ ಸಂಪರ್ಕ ರಸ್ತೆಗಳಿಗೆ ರೂ ೧ಕೋಟಿ ವೆಚ್ಚದಲ್ಲಿ ಕಾಂಕ್ರೀಟು ಮತ್ತು ಡಾಂಬರೀಕರಣಗೊಳಿಸಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಮೇಶ ಉಪಾಧ್ಯಾಯ ತಿಳಿಸಿದ್ದಾರೆ.
