ಬಂಟ್ವಾಳ: ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನಡೆಯುವುದು ಜಗತ್ತಿನ ಕ್ಷೇಮಕ್ಕಾಗಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.WhatsApp Image 2022-02-13 at 3.30.35 PM

ಇಂದು ದೇವಸ್ಥಾನಗಳು ಭಕ್ತರ ಕೈಗೆ ದೊರಕಿದರೆ, ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಸರ್ಕಾರ ಇಂಥ ನಿರ್ಧಾರ ಕೈಗೊಳ್ಳಲು ಹೊರಟಿರುವುದು ಸ್ವಾಗತಾರ್ಹ ಎಂದ ಶ್ರೀಗಳು, ದೇವರ ಪ್ರಾರ್ಥನೆಯಿಂದ ರೋಗಗಳು ಪರಿಹಾರವಾಗುತ್ತವೆ. ನಾವು ದೇವರನ್ನು ನೆನಪಿಸುವುದು ಕಡಿಮೆಯಾಗಬಾರದು, ದೇವತಾ ಕಾರ್ಯಗಳು ಸರಿಯಾಗಿ ನಡೆಯಬೇಕು ಎಂದರು.

ಇದೇ ವೇಳೆ ಮುಂದಿನ ಸಾಲಿನಲ್ಲಿ ನಡೆಯಲಿರುವ ತನ್ನ ಪರ್ಯಾಯದ ಕುರಿತು ಮಾತನಾಡಿದ ಶ್ರೀಗಳು, ತನ್ನ ನಾಲ್ಕನೇ ಪರ್ಯಾಯ ಸಂದರ್ಭ ಗೀತೆಯ ಸಂದೇಶ ಪಸರಿಸಲು ಕೋಟಿ ಗೀತಾಲೇಖನ ಯಜ್ಞ ನಡೆಸಲಾಗುವುದು ಎಂದರು.

ರಾಜ್ಯ ಧಾರ್ಮಿಕ ಪರಿಷತ್ತು ಮಾಜಿ ಸದಸ್ಯ ಕೆ.ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಭಜನೆಯ ಮಹತ್ವವನ್ನು ವಿವರಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವೇದ ಉಪನಿಷತ್ತುಗಳ ಸಾರವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಪುಣ್ಕೆಮಜಲು ಅಧ್ಯಕ್ಷತೆ ವಹಿಸಿದ್ದರು. ಅರೆಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಕಾಕುಂಜೆ ಸಾಫ್ಟ್ ವೇರ್ ನ ಗೋಪಾಲಕೃಷ್ಣ ಭಟ್ ಕಾಕುಂಜೆ, ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಯೋಗೀಶ್ ಆಚಾರ್ಯ, ಕರ್ಣಾಟಕ ಬ್ಯಾಂಕ್ ಡಿಜಿಎಂ ರಾಜಾ ಬಿ.ಎಸ್, ಮೆಸ್ಕಾಂ ಎಇಇ ನಾರಾಯಣ ಭಟ್, ಮುಂಬೈ ಎನ್ ಕ್ಯೂಬ್ ಯೆತಿಕಲ್ಸ್ ಪ್ರೈ ಲಿ. ಉಪಾಧ್ಯಕ್ಷ ಜಿನರಾಜ ಪೂಜಾರಿ ದೇರಾಜೆ, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಸುರೇಶ್ ಆಳ್ವ, ಉದ್ಯಮಿ ಜಿತೇಂದ್ರ ಪೂಜಾರಿ ದೇರಾಜೆ, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ಪುರಂದರ ಎ, ಸಂತಾನಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ, ಉದ್ಯಮಿ ಶರತ್ ರಾಜ್ ಶೆಟ್ಟಿ, ಉದ್ಯಮಿ ಚೇತನ್ ಅರಸ್, ಇಂಜಿನಿಯರ್ ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಅಶೋಕ ಪಕ್ಕಳ ಮತ್ತು ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ವಿವಿಧ ದಾನಿಗಳನ್ನು ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *