ಮೂಡುಬಿದಿರೆ: ಮಾಂಟ್ರಾಡಿ ಅರಮನೆಯ 20 ಎಕರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತವನ್ನು ಬೆಳೆದು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತು ಭತ್ತವೆಲ್ಲಾ ಕೊಳೆತು ನಾಶವಾಗಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿ ಅರಮನೆಬೈಲುಪ್ರದೇಶದ ರೈತರು ಕಂಗಾಲಾಗಿದ್ದಾರೆ.
ಮಾಂಟ್ರಾಡಿ ಗ್ರಾಮದ ಅರಮನೆ ಬೈಲು ಎಂಬಲ್ಲಿನ ಸ್ಥಳೀಯರಾದ 6 ಜನ ಸೇರಿಕೊಂಡು ಅರಮನೆಗೆ ಸಂಬಂಧಿಸಿದ 20 ಎಕರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತದ ಕೃಷಿಯನ್ನು ಮಾಡಿದ್ದರು. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಾಂಟ್ರಾಡಿ ಪ್ರದೇಶದಲ್ಲಿ ಭಾರೀ ಮಳೆ ಬೀಸಿದ್ದು ಇದರ ಪರಿಣಾಮವಾಗಿ 14 ಗದ್ದೆಗಳಲ್ಲಿ ಬೆಳೆದ 200 ಕ್ವಿಂಟಾಲ್ನಷ್ಟು ಭತ್ತದ ಪೈರು ನೀರಿನಲ್ಲಿ ಮುಳುಗಿ ಗದ್ದೆಯ ಮಣ್ಣಿಗೆ ಅಂಟಿಕೊಂಡು ಕೊಳೆತು ಹೋಗಿದೆ ಅತ್ತ ಯಂತ್ರದ ಮೂಲಕವೂ ಇತ್ತ ಕೂಲಿಯಾಳುಗಳ ಮೂಲಕವೂ ಕಟಾವು ಮಾಡಲಾಗದ ಪರಿಸ್ಥಿತಿಯಲ್ಲಿದೆ.
ಕೃಷಿಕರಾದ ಪ್ರಸನ್ನ ಬಲ್ಲಾಳ್, ಧರ್ಮಣ ಆಚಾರಿ, ಪೂವಪ್ಪ ಪೂಜಾರಿ, ನೀಲೇಶ ಪೂಜಾರಿ, ಭಾಸ್ಕರ್ ಆಚಾರಿ ಮತ್ತು ಸುಂದರ ಪೂಜಾರಿ ಅವರು ಒಂದೊಂದು ಗದ್ದೆಗಳಿಗೆ ಸುಮಾರು ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತದ ಕೃಷಿಯನ್ನು ಮಾಡಿದ್ದು ಇದೀಗ ಮಳೆಯ ಅವಾಂತರದಿಂದಾಗಿ ಬೆಳೆದ ಭತ್ತವು ನಾಶವಾಗಿರುವುದರಿಂದ ಮತ್ತೆ ಅದೇ ಗದ್ದೆಗೆ ಯಂತ್ರವನ್ನು ಬಳಸಿ ಉಳುಮೆ ಮಾಡಲು ಹೊರಟಿದ್ದರು. ಆದರೆ ಭಾರೀ ಮಳೆಯಿಂದಾಗಿ ನಷ್ಟವನ್ನು ಅನುಭವಿಸುವಂತಾಗಿದೆ.
