ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ.ಗೀತ ಪ್ರಕಾಶ್ ಮಾತನಾಡಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮತ್ತಿತರರು ಇದ್ದರು. ದೇಶದಲ್ಲಿ ಜನರ ಆರೋಗ್ಯದ ಬಗ್ಗೆ ವಿಶೇಷ ಆದ್ಯತೆ ನೀಡುತ್ತಿರುವ ಅಂತರ್ ರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯು ಇಲ್ಲಿನ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ರೂ ೯ಲಕ್ಷ ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರ ಹಸ್ತಾಂತರಿಸಿದೆ ಎಂದು ಲಯನ್ಸ್ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್ ಹೇಳಿದ್ದಾರೆ.
ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಿದ ಬಳಿಕ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಪಿಸಿಯೋಥೆರಪಿ ಮತ್ತು ಸಂಚಾರಿ ಡಯಾಲಿಸಿಸ್ ಘಟಕ ಅಳವಡಿಸುವ ಬಗ್ಗೆಯೂ ಸಿದ್ಧತೆ ನಡೆದಿದೆ ಎಂದರು.
ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ನಿಯೋಜಿತ ಗವರ್ನರ್ ಸಂಜಿತ್ ಶೆಟ್ಟಿ, ಮಾಜಿ ಗವರ್ನರ್ ದೇವದಾಸ ಭಂಡಾರಿ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಸಂತ ಬಾಳಿಗಾ, ವಿಟ್ಲ ಕ್ಲಬ್ಬಿನ ಅಧ್ಯಕ್ಷ ಮೋನಪ್ಪ ಗೌಡ ಮತ್ತಿತರರು ಇದ್ದರು.
ಮಾಜಿ ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಮ್ಮದ್ ಇಕ್ಬಾಲ್ ವಂದಿಸಿದರು. ಮಂಗೇಶ್ ಭಟ್ ವಿಟ್ಲ ಮತ್ತು ಲೋಕೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
