ಬಂಟ್ವಾಳ : ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಹರಿಪ್ರಸಾದ್ ಮಾತನಾಡಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತಿತರರು ಇದ್ದಾರೆ
ಪುರಸಭೆಯಲ್ಲಿ ಈಚೆಗೆ ನಡೆದ ಪೌರ ಕಾರ್ಮಿಕ ದಿನಾಚರಣೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗೈರು ಸೇರಿದಂತೆ ಪೌರ ಕಾರ್ಮಿಕರಿಗೆ ನೀಡಿದ ಬಿರಿಯಾನಿ ಮತ್ತು ಜಾತಿ ನಿಂದನೆ ಹಾಗೂ ಅನುದಾನ ತಾರತಮ್ಯ ಆರೋಪಗಳು ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಪರಸ್ಪರ ವಾಕ್ಸಮರ ಮತ್ತು ಗದ್ದಲಕ್ಕೆ ಕಾರಣವಾಯಿತು.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಆದ್ಯತೆ ಕಾಮಗಾರಿ ನೆಪದಲ್ಲಿ ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷ (ಬಿಜೆಪಿ) ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಆರೋಪಿಸಿದರು. ನೀತಿ ಅನುಸರಿಸಲಾಗುತ್ತಿದೆ. ಇದಕ್ಕೆ ಬಿಜೆಪಿ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ (ಕಾಂಗ್ರೆಸ್) ಸದಸ್ಯರಾದ ರಾಮಕೃಷ್ಣ ಆಳ್ವ, ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದಾಗ ಪರಸ್ಪರ ವಾಕ್ಸಮರ ನಡೆಯಿತು.
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸದಸ್ಯ ಜನಾರ್ದನ ಚೆಂಡ್ತಿಮಾರ್ ಮತ್ತು ಅನಧಿಕೃತ ಪೈಪ್ ಲೈನ್ ಸಂಪರ್ಕ ಬಗ್ಗೆ ಸದಸ್ಯ ವಾಸು ಪೂಜಾರಿ ಗಮನ ಸೆಳೆದರು. ಪಾಣೆಮಂಗಳೂರು ಸೇತುವೆ ಮೇಲಿನ ಬೀದಿ ದೀಪ ಅಳವಡಿಕೆ ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ಒಂದು ಬಲ್ಬಿಗೆ ರೂ ೧,೬೦೦ ದರ ನಮೂದಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರನ್ನು ಕರೆಸಿ ಎಚ್ಚರಿಕೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಬಿರಿಯಾನಿ, ಅಸಂವಿಧಾನಿಕ ಭಾಷೆ: ಈಚೆಗೆ ನಡೆದ ಪೌರ ಕಾರ್ಮಿಕ ದಿನಾಚರಣೆಯಲ್ಲಿ ಎಲ್ಲಾ ಸದಸ್ಯರಿಗೆ ಕರೆಯದೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಪೌರ ಕಾರ್ಮಿಕರಿಗೆ ಅಗೌರವ ತೋರಿದ್ದಾರೆ. ಇಲ್ಲಿನ ಅಧಿಕಾರಿಗಳು ಸಂವಿಧಾನ ವಿರೋಧಿಗಳಾಗಿದ್ದು, ಇವರನ್ನು ಗುಂಡಿಟ್ಟು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅಸಂವಿಧಾನಿಕ ಪದ ಬಳಸಿ ಸದಸ್ಯರಿಗೆ ಇರಿಸು ಮುರುಸು ಉಂಟು ಮಾಡಿದರು.
ಈ ಬಗ್ಗೆ ಮುಂಬರುವ ಆಯುಧ ಪೂಜೆ ದಿನದಂದು ಎಲ್ಲಾ ಸದಸ್ಯರನ್ನು ಆಹ್ವಾನಿಸಿ ಪೌರಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ನೇಹಕೂಟ ನಡೆಸಿ ಅವರನ್ನು ಗೌರವಿಸಲಾಗುವುದು ಎಂದು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಪ್ರಕಟಿಸಿ ಚರ್ಚೆಗೆ ತೆರೆ ಎಳೆದರು. ಇದೇ ವೇಳೆ ಎರಡನೇ ಹಂತದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಪರಿಷ್ಕೃತ ಠರಾವು ಮಂಡಿಸುವ ಬಗ್ಗೆ ಜಲಮಂಡಳಿ ಎಂಜಿನಿಯರ್ ಶೋಭಲಕ್ಷಿಮ ಮಾಹಿತಿ ನೀಡಿದರು.
ಜಾತಿ, ಧರ್ಮನಿಂದನೆ ಆರೋಪ: ಪೌರ ಕಾರ್ಮಿಕರಿಗೆ ಬಿರಿಯಾನಿ ತರಿಸಿದ ವಿಚಾರದಲ್ಲಿ ಇಲ್ಲಿನ ಅಧಿಕಾರಿಗಳು ಜಾತಿ ಮತ್ತು ಧರ್ಮ ನಿಂದನೆಗೊಳಿಸಿದ್ದಾರೆ ಎಂದು ಎಸ್ ಡಿಪಿ ಐ ಸದಸ್ಯರಾದ ಮುನೀಷ್ ಆಲಿ, ಸಿದ್ದಿಕ್ ಗುಡ್ಡೆಯಂಗಡಿ, ಇದ್ರಿಸ್, ಕಾಂಗ್ರೆಸ್ ಸದಸ್ಯ ಹಸೈನಾರ್ ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಸದಸ್ಯರಾದ ವಿದ್ಯಾವತಿ, ದೇವಕಿ, ಶಶಿಕಲಾ, ಜಯರಾಮ ಬೊಂಡಾಲ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಅಧಿಕಾರಿಗಳಾದ ಲೀಲಾವತಿ, ಉಮಾವತಿ, ಮೀನಾಕ್ಷಿ, ರಝಾಕ್ ಇದ್ದರು.
