ಕೈಕಂಬ : ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ, ಪೋಕ್ಸೋ, ಮನೆ ದರೋಡೆ ಮೊದಲಾದ ಮಹಿಳೆಯರ ಮೇಲಿನ ಪ್ರಕರಣಗಳಲ್ಲಿ ದೂರುದಾರರು ಸೂಕ್ತ ಸಾಕ್ಷಿ ಒದಗಿಸಿದಲ್ಲಿ ಸಂತ್ರಸ್ತರಿಗೆ ೫ರಿಂದ ೧೦ ಲಕ್ಷ ರೂ ಪರಿಹಾರ ಲಭಿಸುತ್ತದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಈ ಕಾನೂನಿನ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಮಂಗಳೂರು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಪೃಥ್ವೀರಾಜ್ ವರ್ಣೆಕರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಗುರುಪುರ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಸೋಮವಾರ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾದ ಪೌಷ್ಠಿಕ ಆಹಾರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ, ಮಾತೃ ವಂದನಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೋವಿಡ್ ಕಷ್ಟ-ಕಾರ್ಪಣ್ಯದ ದಿನಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಮಕ್ಕಳು ಮತ್ತು ಬಾಣಂತಿಯರ ಆರೋಗ್ಯದ ಜೊತೆಗೆ ಶಿಕ್ಷಣದ ಬಗ್ಗೆ ಸರ್ಕಾರ ಕೈಗೊಂಡಿರುವ ಈ ಜನಪ್ರಿಯ ಕಾರ್ಯಕ್ರಮದ ಬಳಿಕ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.
ಅತ್ಯಾಚಾರ, ವರದಕ್ಷಿಣೆ ಅಥವಾ ಮಹಿಳೆಯರ ವಿರುದ್ಧದ ಇನ್ನಿತರ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಗೆ ಪರಿಹಾರ ನೀಡಿದರೆ ಸಾಲದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ ಎಂದು ಪಂಚಾಯತ್ ಸದಸ್ಯೆ ಸಫರಾ ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ದಿಲ್‌ಶಾದ್ ಎ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವಲಯ ಮೇಲ್ವೀಚಾರಕಿ ಶೈಲಾ ಕೆ ಕಾರಗಿ, ನಾಗೇಶ್, ಪಂಚಾಯತ್ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರೆ, ಅಂಗನವಾಡಿ ಮೇಲ್ವಿಚಾರಕಿ ಚಂಚಲಾಕ್ಷಿ ವಂದಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ವತಿಯಿಂದ ನ್ಯಾ ವರ್ಣೆಕರ್, ಕಾರಗಿ ಹಾಗೂ ಯಶವಂತ ಶೆಟ್ಟಿ ಅವರಿಗೆ ಪುಸ್ತಕ ನೀಡಿ ಗೌರವಿಸಲಾಯಿತು.
