ಕೈಕಂಬ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತು ಬೆಲೆ ಏರಿಕೆ ನೀತಿ ವಿರೋಧಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಭಾನುವಾರ ಗಂಜಿಮಠ ಜಂಕ್ಷನ್‌ನಿಂದ ಗುರುಪುರ ಕೈಕಂಬ ಜಂಕ್ಷನ್‌ವರೆಗೆ ಸೈಕಲ್ ಜಾಥಾ ನಡೆಸಿತು.
ಪ್ರತಿಭಟನಾ ಜಾಥಾ ಉದ್ಘಾಟಿಸಿದ ಮಾಜಿ ಶಾಸಕ ಮೊಯಿದಿನ್ ಬಾವಾ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಜು. ೭ರಿಂದ ೧೭ರವರೆಗೆ ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪಕ್ಷವು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ ಸಾಮಾನ್ಯ ಜನತೆಗೆ ಮಗ್ಗುಲು ಮುಳ್ಳಾಗಿದೆ. ಮೋದಿಗಿಂತ ಬ್ರಿಟಿಷರ ಸರ್ಕಾರ ಒಳ್ಳೆದಿತ್ತು ಎಂದು ಜನಸಾಮಾನ್ಯರು ಹೇಳಿಕೊಳ್ಳುವಂತಾಗಿದೆ. ಬೆಲೆ ಇಳಿಯದ ಹೊರತು ನಮ್ಮ ಹೋರಾಟ ನಿಲ್ಲದು ಎಂದರು.
ಸೈಕಲ್ ಜಾಥಾ ಆಯೋಜಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರ ವಿರುದ್ಧ ಅಧಿಕಾರ ಚಲಾಯಿಸುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಲಂಗು ಲಗಾಮಿಲ್ಲದೆ ಏರುತ್ತಿದೆ ಎಂದರು. ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ ಮಾತನಾಡಿ, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಗ್ಯಾಸ್ ಮತ್ತು ವಿದ್ಯುತ್ ದರ ಮನ್ನಾ ಮಾಡುವ ಬದಲಿಗೆ, ಪೆಟ್ರೋಲ್ ದರ ಏರಿಕೆ ಜೊತೆಗೆ ತೈಲದ ಮೇಲೆ ತೆರಿಗೆ ಹೇರಿರುವ ಮೋದಿ ಸರ್ಕಾರ ದೇಶದ ಬೊಕ್ಕಸದ ಬದಲಿಗೆ ರಿಲಾಯನ್ಸ್ನ ಅಂಬಾನಿಗೆ ಲಾಭ ಮಾಡುತ್ತಿದೆ ಎಂದು ಟೀಕಿಸಿದರು.
ಸೈಕಲ್ ಜಾಥಾದಲ್ಲಿ ಜಿಪಂ ಮಾಜಿ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಮಾಜಿ ಸದಸ್ಯ ಸುನಿಲ್ ಜಿ, ಗುರುಪುರ ಗ್ರಾಪಂ ಸದಸ್ಯರಾದ ದಾವೂದ್ ಮತ್ತು ಎ ಕೆ ಅಶ್ರಫ್, ಪಕ್ಷ ಮುಖಂಡರಾದ ಹರೀಶ್ ಭಂಡಾರಿ, ವಿನಯ ಕುಮಾರ್ ಶೆಟ್ಟಿ, ಬಾಷಾ ಮಾಸ್ಟರ್, ಬಾಷಾ ಬಂಗ್ಲೆಗುಡ್ಡೆ, ಫಾಸ್ಕಲ್ ಫೆರ್ನಾಂಡಿಸ್, ಟಿ ಎಂ ಇರ್ಫಾನ್, ಎ ಕೆ ಮುಹಮ್ಮದ್, ಬೂಬ ಕೈಕಂಬ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
