ಕೈಕಂಬ:ಕಳೆದ ವರ್ಷ ಜೂನ್ ೧೨ರಂದು ಗುರುಪುರದಲ್ಲಿ ನೂತನ ಸೇತುವೆ ಲೋಕಾರ್ಪಣೆಗೊಂಡಿದ್ದರೆ, ಈ ವರ್ಷ ಆಗಸ್ಟ್ ಮಧ್ಯಾವಧಿಗೆ ಬಹುನಿರೀಕ್ಷಿತ ಮೂಲರಪಟ್ಣ ಸೇತುವೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.
ಮೂಲರಪಟ್ಣ ಸೇತುವೆ.
೨೦೧೮ರ ಜೂನ್ ೨೬ರಂದು ಮೂಲರಪಟ್ಣ ಹಳೆ ಸೇತುವೆ ಏಕಾಏಕಿಯಾಗಿ ಮುರಿದು ಬಿದ್ದಿತ್ತು. ಗುರುಪುರದಲ್ಲಿ ಶತಮಾನ ಕಂಡ ಹಳೆ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಿರುವ ಕಾವೂರಿನ ಮೊಗರೋಡಿ ಕನ್ಸ್ಟಕ್ಷನ್ ಸಂಸ್ಥೆಯೇ ಮೂಲರಪಟ್ಣದಲ್ಲೂ ಸೇತುವೆ ನಿರ್ಮಿಸುತ್ತಿದೆ. ಈ ಸೇತುವೆ ಕಾಮಗಾರಿ ಜುಲೈಯಲ್ಲಿ ಪೂರ್ಣಗೊಳ್ಳಬೇಕಿದ್ದರೂ ಮಳೆ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಒಂದು ತಿಂಗಳು ವಿಳಂಬವಾಗಿ ಆಗಸ್ಟ್ನಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಮೂಲರಪಟ್ಣ ಸೇತುವೆಯ ಕಾಮಗಾರಿ.
೨೦೧೮-೧೯ರಲ್ಲಿ ಮೂಲರಪಟ್ಣ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಇದು ಲೋಕೋಪಯೋಗಿ ಇಲಾಖೆಯ(ಪಿಡಬ್ಲ್ಯೂಡಿ) ಮೇಲುಸ್ತುವಾರಿಯಲ್ಲಿ ಸುಮಾರು ೧೪.೬೯ ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ. ಶೇ ೭೫ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಏಳು ಮೀಟರ್ ಎತ್ತರದ ಐದು ಪಿಲ್ಲರ್ಗಳ ಮೇಲ್ಗಡೆ ಈಗ ಎರಡು ಸ್ಲ್ಯಾಬ್ ಅಳವಡಿಸಲಾಗಿದ್ದು, ಇನ್ನು ನಾಲ್ಕು ಸ್ಲ್ಯಾಬ್ ಅಳವಡಿಕೆ ಬಾಕಿ ಇದೆ. ಇದು ಪೂರ್ಣಗೊಂಡರೆ ಸೇತುವೆಯ ಶೇ ೯೯ರಷ್ಟು ಕಾಮಗಾರಿ ಪೂರ್ಣಗೊಂಡಂತೆ. ಗುರುಪುರದಂತೆ ಮೂಲರಪಟ್ಣದಲ್ಲೂ ಫಲ್ಗುಣಿ ನದಿಗೆ ಅಡ್ಡಲಾಗಿ ಹೊಸ ಸೇತುವೆ(ಸಂಕ) ನಿರ್ಮಾಣಗೊಳ್ಳುತ್ತಿದೆ.
ಎರಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲರಪಟ್ನ ಸೇತುವೆ
ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆಗಾಗಿ ಸರ್ಕಾರದಿಂದ ಹಣಕಾಸು ಮಂಜೂರಾತಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಜಂಟಿಯಾಗಿ ಶ್ರಮಿಸಿದ್ದಾರೆ ಎಂಬುದು ವಿಶೇಷ.
ಸೇತುವೆ ಮುರಿದು ಬಿದ್ದ ಬಳಿಕ ಈ ಭಾಗದ ಜನರು ಪ್ರಯಾಣ ಮತ್ತು ಸಾಗಾಟ ದೆಸೆಯಲ್ಲಿ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುತ್ತಿಬಳಸಿ ದುಬಾರಿ ವೆಚ್ಚದಲ್ಲಿ ಪ್ರಯಾಣಿಸುತ್ತಿದ್ದ ಇಲ್ಲಿನ ಜನರಿಗೆ ೨೦೨೧ರ ಆಗಸ್ಟ್ ಮರೆಯಲಾರದ ಮಾಸವಾಗಬಹುದು. ಸೇತುವೆಯು ಮಂಗಳೂರು-ಗAಜಿಮಠ-ಮೂಡಬಿದ್ರೆ-ಎಡಪದವು-ಕುಪ್ಪೆಪದವು ಭಾಗದಿಂದ ಬಿ ಸಿ ರೋಡಿಗೆ ನೇರ ಸಂಪರ್ಕ ಕೊಂಡಿಯಾಗಿದೆ.
11-06-2020 ರಂದು ಲೋಕಾರ್ಪಣೆ ಗೊಂಡ ಗುರುಪುರ ಸೇತುವೆ.
“ಯಾವುದೇ ಒಂದು ಕಾಮಗಾರಿ ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸ್ಥೆಯ ಮಾಲಕ ಸುಧಾಕರ ಶೆಟ್ಟಿ ನಿಲುವಾಗಿದೆ. ಸಿಬ್ಬಂದಿ ವರ್ಗವೂ ಅವರ ಈ ನಿಲುವಿಗೆ ಬೆಂಗಾಲವಾಗಿದೆ. ಮಳೆ ಮತ್ತು ತಾಂತ್ರಿಕ ಕಾರಣಗಳಿಂದ ಸೇತುವೆ ನಿರ್ಮಾಣ ಕಾರ್ಯವು ಗಡುವಿಗಿಂತ ಒಂದು ತಿಂಗಳು ವಿಳಂಬವಾಗಲಿದೆ. ವಿಶೇಷ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಿಸಲಾಗುತ್ತಿದೆ” ಎಂದು ಸಂಸ್ಥೆಯ ಪ್ರಮುಖ ಇಂಜಿನಿಯರ್ ದಾಮೋದರ್ ಎಂ ಕೆ ತಿಳಿಸಿದರು.
ಧನಂಜಯ ಗುರುಪುರ


