ಮೂಡುಬಿದಿರೆ: ಕೋವಿಡ್ ಸೋಂಕಿಗೊಳಗಾದ ವ್ಯಕ್ತಿಗಳು ಹೋಂ ಐಸೋಲೇಷನಲ್ಲಿದ್ದು ಚಿಕಿತ್ಸೆ ಪಡೆಯುವುದು ಸುರಕ್ಷಿತವಲ್ಲ. ಅಂತಹ ವ್ಯಕ್ತಿಗಳು ಮೂಡುಬಿದಿರೆಯ ಕನ್ನಡಭವನದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಬಹುದು. ಈ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋಂಕಿಗೊಳಗಾದ ವ್ಯಕ್ತಿಗಳು ಮನೆಯಲ್ಲಿದ್ದರೆ ಮನೆಯ ಇತರ ಸದಸ್ಯರಿಗೂ ಸೋಂಕು ಹರಡುವ ಅಪಾಯ ಇದೆ. ಇಂತಹ ತೊಂದರೆಗಳನ್ನು ತಪ್ಪಿಸಬೇಕಾದರೆ ಸೊಂಕು ದೃಢವಾದ ಕೂಡಲೇ ಅಂತಹ ವ್ಯಕ್ತಿ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆಗೊಳಗಾಗಿ ವೈದ್ಯರ ಸಲಹೆ ಪಡೆಯಬೇಕು. ಕನ್ನಡ ಭವನದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ಈಗಾಗಲೇ ಇಂತಹ ವ್ಯಕ್ತಿಗಳಿಗೆ ಸುಮಾರು ನೂರು ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು ಇವರಿಗೆ ಚಿಕಿತ್ಸೆ, ಕೌನ್ಸಿಲಿಂಗ್, ಊಟೋಪಚಾರ ಹಾಗೂ ಉಳಿದುಕೊಳ್ಳುವ ವ್ಯವಸ್ಥೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.ಜನಪ್ರತಿನಿಧಿಗಳು, ಸಂಘ ಸಂಸ್ಥೆಪ್ರತಿನಿಧಿಗಳು, ಆರೋಗ್ಯ ಕರ‍್ಯಕರ್ತೆಯರು ಈ ಬಗ್ಗೆ ಜಾಗೃತಿ ಮೂಡಿಸಿ ಸೋಂಕಿತರು ಕನ್ನಡ ಭವನದಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯಲು ಪ್ರೇರೇಪಿಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಕೋವಿಡ್ ಸೋಂಕಿನ ಪ್ರಾಥಮಿಕ ಹಂತದಲ್ಲಿರುವ ವ್ಯಕ್ತಿಗಳು ಕನ್ನಡ ಭವನದಲ್ಲಿ ಬಂದು ಚಿಕಿತ್ಸೆ ಪಡಕೊಂಡರೆ ಸಂಪೂರ್ಣ ಗುಣಮುಖರಾಗಬಹುದು. ಇಲ್ಲೆ ಉಳಿದುಕೊಂಡು ಉಚಿತ ಚಿಕತ್ಸೆ ಪಡೆಯಬಹುದು. ಕೋವಿಡ್ ರೋಗಕ್ಕೆ ಪ್ರಾಥಮಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದರೆ ಭಯಪಡಬೇಕಾಗಿಲ್ಲ.
ಕನ್ನಡ ಭವನದಲ್ಲಿ ಕೋವಿಡ್ ಸೋಂಕಿತರಿಗೆ ಈಗಾಗಲೇ ನೂರು ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು ಇವುಗಳ ಪೈಕಿ ಕೆಲವು ವಿಶೇಷ ಕೊಠಡಿಗಳು ಇವೆ. ಅಗತ್ಯ ಬಿದ್ದರೆ ನಮ್ಮ ಕಾಲೇಜು ಹಾಸ್ಟೆಲ್‌ಗಳನ್ನು ಬಳಕೆ ಮಾಡಲಾಗುವುದು. ಕೋವಿಡ್ ಸೋಂಕಿತರು ಅಂಜಿಕೆ ಇಲ್ಲದೆ ಮುಂದೆ ಬಂದು ಇಲ್ಲಿನ ಸೇವೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ ಉಪಸ್ಥಿತರಿದ್ದರು.
