ಬಂಟ್ವಾಳ : ಮೊದಲ ಹಂತವಾಗಿ ಬಂಟ್ವಾಳ ತಾಲೂಕಿನ ೫೭ ಗ್ರಾ.ಪಂ.ಗಳ 822 ಸ್ಥಾನಗಳಿಗೆ ಮಂಗಳವಾರ ಶಾಂತಯುತವಾದ ಮತದಾನ ನಡೆದಿದ್ದು, ಒಟ್ಟು ಶೇ.77.7 ರಷ್ಟು ಮತದಾನವಾಗಿದೆ. ಈ ನಡುವೆ ಕಾವಳಮೂಡೂರು ಗ್ರಾಪಂ ವ್ಯಾಪ್ತಿಯ ವಾಡ್೯ 4 ರ ಮತಗಟ್ಟೆಯಲ್ಲಿದ್ದ ಅಭ್ಯಥಿಯೊಬ್ಬರು ಹಾಗೂ ಅವರ ಬೆಂಬಲಿಗರಿಗೆ ಗಸ್ತಿನಲ್ಲಿದ್ದ ಕಡಬ ಪೊಲೀಸ್ ಠಾಣೆಯ ಎಸ್ ಐ ವಿನಾಕಾರಣವಾಗಿ ಗದರಿಸಿ,ಮತಗಟ್ಟೆಯಿಂದ ಚದುರಿಸಲು ಯತ್ನಿಸಿರುವ ಆರೋಪ ವ್ಯಕ್ತವಾಗಿದ್ದು,ಈ ಬಗ್ಗೆ ಪ್ರಮುಖರೊಬ್ಬರು ನೇರವಾಗಿ ಜಿಲ್ಲಾ ಎಸ್ಪಿಯವರ ಗಮನಕ್ಕೆ ತಂದ ಬೆನ್ನಲ್ಲೆ ಎಸ್ ಐ ಅವರು ಮತ್ತೆ ಬೂತ್ ಗೆ ಅಗಮಿಸಿ ಅಭ್ಯರ್ಥಿ ಜೊತೆ ಸಮಾಧಾನದಿಂದ ಮಾತನಾಡಿ ತೆರಳಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೊರೋನ ನಿಯಮವನ್ನು ಮತಗಟ್ಟೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು… ಪ್ರತಿಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಸಹಾಯಕಿಯರು ಆರೋಗ್ಯ ತಪಾಸಣೆಯ ಕರ್ತವ್ಯದಲ್ಲಿ ನಿರತರಾಗಿದ್ದರು.
ಶಾಸಕರಿಂದ ಮತದಾನ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತೆಂಕ ಎಡಪದವು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರೆ,ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬೋಳಿಯಾರ್ ಗ್ರಾಮದ ರಂತಡ್ಕ ಶಾಲೆಯಲ್ಲಿ ಮತಚಲಾಯಿಸಿದರು. ಮಾಜಿ ಸಚಿವ ರಮಾನಾಥ ರೈ ಅವರು ಕಳ್ಳಿಗೆ ಗ್ರಾಪಂ ವ್ಯಾಪ್ತಿಯ ತೊಡಂಬಿಲ ಶಾಲೆಯಲ್ಲಿ ಮತಚಲಾಯಿಸಿದರು. ಆರ್ ಎಸ್ ಎಸ್ ಪ್ರಮುಖ ಕಲ್ಲಡ್ಕ ಡಾ.ಪ್ರಭಾಕರ ಭಟ್ ದಂಪತಿ ಕಲ್ಲಡ್ಕ ಶಾಲೆಯಲ್ಲಿ ಹಾಗೆಯೇ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,ರುಕ್ಮಯ ಪೂಜಾರಿ ಅವರು ತಮ್ಮ,ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ ಚಲಾಯಿಸಿದರು. 
ಕೆಲ ಪಂಚಾಯತ್ ಗಳಲ್ಲಿ ನೇರಾನೇರ ಸ್ಪರ್ಧೆಯ ವಾತಾವರಣ ಕಂಡುಬಂದರೆ,ಕೆಲ ಪಂಚಾಯತ್ ಗಳಲ್ಲಿ,ತ್ರಿಕೋನ,ಚತುಷಕೋನ ಸ್ಪರ್ಧೆಯು ಕಂಡುಬಂದಿದೆ.ಕೆಲ ಪಂಚಾಯತ್ ನಲ್ಲಿ ನಿಕಟಪೂರ್ವ ಸದಸ್ಯರಿಗೆ ತಾವು ಪ್ರತಿನಿಧಿಸುತ್ತಿದ್ದ ಪಕ್ಷದಿಂದ ಈ ಚುನಾವಣೆಯಲ್ಲಿ ಅವಕಾಶ ಸಿಗದಿದ್ದರಿಂದ ಪ್ರತ್ಯೇಕವಾಗಿ (ಬಂಡಾಯ) ಸ್ಪರ್ಧಿಸಿರುವುದು ಕಂಡುಬಂದಿದೆ. ಸಂಜೆ ಮತದಾನದ ಅವಧಿ ಮುಗಿಯುತ್ತಿದ್ದಂತೆ ಮೊಡಂಕಾಪು ಇನೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಅಮ್ಟಾಡಿ ಗಾಪಂ ಮತಗಟ್ಟೆಯ ಅಧಿಕಾರಿಗಳು ಮೊದಲಿಗೆ ಬಂದು ತಮ್ಮ ಅಂಕಿಅಂಶ ಸಲ್ಲಿಸಿದರು.
ಮಹಿಳೆಯರಿಂದಲೇ ಅಧಿಕ ಮತದಾನ : ಒಟ್ಟು 277049 ಮತದಾರರಿದ್ದು, 136698 ಪುರುಷರ ಪೈಕಿ 104156 ಮಂದಿ ಮತಚಲಾಯಿಸಿದರೆ ,1,40339 ಮಹಿಳಾ ಮತದಾರರ ಪೈಕಿ 111376 ಮಂದಿ ಹಾಗೂ 12 ಮಂದಿ ಇತರೆ ಮತದಾರರಲ್ಲಿ 3 ಮಂದಿ ಮತದಾನ ಮಾಡಿದ್ದಾರೆ.ಒಟ್ಟು 215535 ಮಂದಿ ಮತ ಚಲಾಯಿಸಿದ್ದು ,ಇದರೊಂದಿಗೆ ಮತದಾನದಲ್ಲು ಮಹಿಳೆಯರೇ ಮೇಲುಗೈ ತೋರಿದ್ದಾರೆ . 
ಸಿಬ್ಬಂದಿ ಬದಲಾವಣೆ: ಬಡಗಬೆಳ್ಳೂರು ಮತಗಟ್ಟೆಯಲ್ಲಿ ಸ್ಯಾನಟೈಸ್ ಮಾಡುತ್ತಿದ್ದ ಆಶಾ ಕಾರ್ಯ ಕರ್ತೆ ಯೊಬ್ಬರು ವೃದ್ಧ ಮತದಾರರನ್ನು ಕರೆದುಕೊಂಡು ಹೋಗಿ ಖುದ್ದು ಮತದಾನ ಮಾಡಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿಆಕೆಯನ್ನು ತಕ್ಷಣ ಬದಲಾಯಿಸಿ ಮತ್ತೊಬ್ಬರನ್ನು ನಿಯೋಜಿಸಿದ ಪ್ರಸಂಗವು ನಡೆದಿದೆ. ಅಧಿಕಾರಿಗಳಿಂದ ಪರಿಶೀಲನೆ: ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್, ತಹಶೀಲ್ದಾರ್ ಅನಿತಾಲಕ್ಷ್ಮೀ,ತಾಪಂ ಇಒ ರಾಜಣ್ಣ ಹಾಗೂವಿವಿಧ ಮತಗಟ್ಟೆಗೆ ತೆರಳಿ ಪರಿಶೀಲಿಸಿದ್ದಲ್ಲದೆ ಮಸ್ಟರಿಂಗ್ ಕೇಂದ್ರದಲ್ಲಿದ್ದು ಸಲಹೆ ಸೂಚನೆಗಳನಿತ್ತರು. ವ್ಯಾಪಕ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
30 ರಂದು ಮತ ಎಣಿಕೆ: ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮಸ್ಟರಿಂಗ್ ಡಿ’ ಮಸ್ಟರಿಂಗ್ ಕೇಂದ್ರದಲ್ಲಿ ಡಿ.30 ಮತ ಎಣಿಕೆ ನಡೆಯಲಿದ್ದು ಅದುವರೆಗೆ 822 ಸ್ಥಾನಗಳಿಗೆ 1925 ಮಂದಿಯ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿರಲಿದೆ. 
ಶಾಸಕರಿಂದ ಅಭಿನಂದನೆ: ಶಾಂತಯುತ ಮತದಾನಕ್ಕೆ ಸಹಕರಿಸಿದ ಮತದಾರರು ಹಾಗೂ ಚುನಾವಣೆಯನ್ನು ಸೂಸೂತ್ರವಾಗಿ ನಡೆಸಿದ ತಾಲೂಕಿನ ಎಲ್ಲಾ ಅಧಿಕಾರಿವರ್ಗಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಭಿನಂದನೆ ಸಲ್ಲಿಸಿದ್ದಾರೆ.
