ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಪಕ್ಷಾಂತರ ಪರ್ವದ ಹೈಡ್ರಾಮವೊಂದು ನಡೆದಿದ್ದು, ಸಾಲೆತ್ತೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ, ಮಾಣಿ ಜಿ.ಪಂ.ಕ್ಷೇತ್ರದ ಸದಸ್ಯೆ ಮಂಜುಳಾ ಮಾವೆ ಅವರು ಕೂಡ ತನ್ನ ಪತಿಯ ಜೊತೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ತೊರೆದು, ಬಿಜೆಪಿಯ ಸೇರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು,ದ.ಕ ಜಿಲ್ಲಾಧ್ಯಕ್ಷ ಎಂ. ಸುದರ್ಶನ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಯವರ ಸಮ್ಮುಖದಲ್ಲಿ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಮಂಜುಳಾ ಮಾವೆ ಅವರು ತಮ್ಮ ಜಿಪಂ ಅವಧಿ ಪೂರ್ಣಗೊಂಡ ಬಳಿಕ ಕಾಂಗ್ರೇಸ್ ತೊರೆದು ಬಿಜೆಪಿ ಸೇರುವರೆಂದು ಹೇಳಲಾಗುತಿತ್ತು. ಆದರೆ ಅವರು ಕೂಡ ತನ್ನ ಪತಿಯ ಜೊತೆಯಲ್ಲೇ ಬಿಜೆಪಿ ಬಾವುಟ ಹಿಡಿದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ‘ಬಿ’ ಫಾರಂ ನಲ್ಲಿ ಗೆದ್ದಿದ್ದ ಮಂಜುಳಾ ಮಾವೆ ಈಗ ಬಿಜೆಪಿಗೆ ಪಕ್ಷಾಂತರಗೊಂಡಿರುವುದರಿಂದ ತಾಲೂಕಿನಲ್ಲಿ 9 ಜಿಪಂ ಕ್ಷೇತ್ರದ ಪೈಕಿ 4 ಜಿಪಂ ಕ್ಷೇತ್ರದಲ್ಲಿದ್ದ ಬಿಜೆಪಿ ಸದಸ್ಯರ ಸಂಖ್ಯೆ 5 ಕ್ಕೇರಿದಂತಾಗಿದೆ.
ಮಂಜುಳಾ ಮಾವೆಯವರ ಪತಿಯು ಬಿಜೆಪಿಗ :
ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದವರ್ಗಗಳ ಅಧ್ಯಕ್ಷ,ಬಂಟ್ವಾಳ ತಾಪಂ ನ ಮಾಜಿ ಸದಸ್ಯ ಮಾಧವ ಮಾವೆ ಹಾಗೂ ಬಂಟ್ಚಾಳ ತಾ.ಪಂ.ನ ಹಾಲಿ ಸದಸ್ಯ ಕುಮಾರ್ ಭಟ್ ಇವರು ತಮ್ಮ ಹಲವಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.ಕುಮಾರ್ ಭಟ್ ಕಾಂಗ್ರೆಸ್ ‘ಬಿ’ ಫಾರಂನಿಂದ ಬಂಟ್ವಾಳ ತಾಪಂಗೆ ಸದಸ್ಯರಾಗಿ ಚುನಾಯಿತರಾಗಿದ್ದು ಬುಧವಾರ ಇವರು ತಾಪಂ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.
ಮಾಧವ ಮಾವೆ ಅವರನ್ನು ಮಾಜಿ ಸಚಿವ ರಮಾನಾಥ ರೈ ಅವರು ಪಕ್ಷ ಬಿಡದಂತೆ ಮನವೊಲಿಸಲು ಯತ್ನಿಸಿದ್ದರಾದರೂ ಅದು ಫಲಪ್ರದವಾಗಿರಲಿಲ್ಲ. ನಾಯಕತ್ವದ ಕೊರತೆ, ಸತತ ಸೋಲಿನ ವೈಫಲ್ಯದಿಂದ ಬೇಸತ್ತು ಬಂಟ್ವಾಳ ಕ್ಷೇತ್ರದಲ್ಲಿ ಇನ್ನಷ್ಟು ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಬಿಜೆಪಿಯ ಕದ ತಟ್ಟುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಹೇಳಿಕೆ.
ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿ ನಿಭಾಯಿಸಿದ್ದೆನೆ:ರೈ
ಪಕ್ಷದ ಸ್ಥಾನ, ಚುನಾವಣೆಯ ಸೀಟು ಹಂಚಿಕೆ ವಿಚಾರ ಬಂದಾಗಲೆಲ್ಲಾ ಯಾರಿಗೂ ನೋವಾಗದಂತೆ,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೆನೆ.ಮಾಧವಮಾವೆ ಅವರಿಗೂ ಹಲವಾರು ಅವಕಾಶ ನೀಡಲಾಗಿದೆ.ಅವರ ಪತ್ನಿ ಮಂಜುಳಾ ಮಾವೆ ಅವರನ್ನು ನಮ್ಮ ಪಕ್ಷದಿಂದ ಜಿಪಂ ಸದಸ್ಯೆಯನ್ನಾಗಿ ಮಾಡಲಾಗಿದೆ.
ಅವರಿಬ್ಬರು ಹೇಳಿರುವ ಕೆಲಸವನ್ನು ಮಾಡಿಕೊಡಲಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪಪ್ರಚಾರದಿಂದ ತನಗೆ ಸೋಲಾಗಿರಬಹುದು,ತನ್ನ ಕಾಲಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವ ಸಂತೃಪ್ತಿ ಇದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
