ಮಂಗಳೂರು: ನಗರದ ಹೊರವಲಯದ ವಾಮಂಜೂರು ಸಮೀಪ ಯುವಕನೊಬ್ಬನ ಮೇಲೆ ನಾಲ್ಕೈದು ಮಂದಿಯ ತಂಡ ಮರದ ಸೋಂಟೆಯಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಗಂಭೀರ ಗಾಯಗೊಂಡಿರುವ ಪ್ರವೀಣ್ ಕಾರ್ಲೋ (33)ನನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಪ್ರವೀಣ್ ಕಾರ್ಲೋ ಈ ಹಿಂದೆ ರವಿಪೂಜಾರಿ ಸಹಚರನೆಂದು ಗುರುತಿಸಿಕೊಂಡಿದ್ದು ಕೆಲವು ಹಲ್ಲೆ, ಕೊಲೆಯತ್ನ, ಉದ್ಯಮಿಗಳಿಗೆ ಹಫ್ತಾಕ್ಕಾಗಿ ಬೆದರಿಸಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಗುರುವಾರ ಮಧ್ಯಾಹ್ನ ಆತ ವಾಮಂಜೂರಿನಲ್ಲಿ ಇದ್ದ ಸಂದರ್ಭ ವಾಹನಗಳಲ್ಲಿ ಬಂದಿದ್ದ ಗುಂಪೊಂದು ಆತನ ಮೇಲೆ ದಾಳಿ ಮಾಡಿದ್ದು ಮರದ ಸೋಂಟೆಗಳಿಂದ ಮಾರಣಾಂತಿಕ ಹಲ್ಲೆ ಮಾಡಿದೆ.
ಈ ವೇಳೆ ಪ್ರವೀಣ್ ಕಾರ್ಲೋ ರಕ್ಷಣೆಗಾಗಿ ಓಡಿದ್ದು ಸ್ಥಳೀಯರು ಗುಂಪು ಸೇರಿದ್ದನ್ನು ಕಂಡು ದುಷ್ಕರ್ಮಿ ಗಳು ಪರಾರಿಯಾಗಿದ್ದಾರೆ. ಘಟನಾಸ್ಥಳಕ್ಕೆ ಕಂಕನಾಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರವೀಣ್ ಕಾರ್ಲೋ ತಲೆ ಹಾಗೂ ಎದೆಯ ಭಾಗಕ್ಕೆ ಏಟು ಬಿದ್ದಿದ್ದು ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಪೂರ್ವ ದ್ವೇಷ ಇಲ್ಲವೇ ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆಸಿರುವ ಶಂಕೆಯಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


