ಮೂಡುಬಿದಿರೆ: ರೈತರು ಮಾತ್ರ ಸಮಯದ ಮುಖ ನೋಡದೆ ಕೆಲಸ ಮಾಡುವವರು. ಆದರೆ ಸಾಂಪ್ರದಾಯಿಕ ಕೃಷಿಯಷ್ಟೇ ಅವರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡದು. ಅದಕ್ಕಾಗಿ, ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಜತೆಗೆ ಹೈನುಗಾರಿಕೆ, ಜೇನು ಕೃಷಿಯಂಥ ಉಪಕಸುಬುಗಳನ್ನೂ ನಿಯತ್ತಿನಿಂದ ನಡೆಸಿಕೊಂಡುಬರುವುದರಿಂದ ಅವರ ಬದುಕು ಹಸನಾಗಬಲ್ಲುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕರ್ನಾಟಕ ಸರ್ಕಾರ ಮತ್ತು ದ.ಕ. ಜಿ.ಪಂ. ತೋಟಗಾರಿಕೆ ಇಲಾಖೆ ಮತ್ತು ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಏರ್ಪಡಿಸಲಾದ ದ್ವಿದಿನ ಜೇನು ಕೃಷಿ ತರಬೇತಿ ಕಾರ್ಯಕ್ರಮದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು.
ಜಿಪಂ ಸದಸ್ಯ ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಜಿ.ಪಂ. ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರವೀಣ್, ಕೃ.ವಿ.ವಿ. ಕೇಂದ್ರದ ಅಧ್ಯಕ್ಷ ಜಿನೇಂದ್ರ ಜೈನ್ ಭಾಗವಹಿಸಿದ್ದರು.
ಬಂಟ್ವಾಳದ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹಾಗೂ ರಾಜ್ಯ ಸರ್ಕಾರದ ಈ ಸಾಲಿನ `ಸಹಕಾರ ರತ್ನ’ ಪ್ರಶಸ್ತಿ ಪುರಸ್ಕøತ, ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸನ್ಮಾನ ಪತ್ರಗಳನ್ನು ವಾಚಿಸಿದರು.
ಪ್ರಗತಿಪರ ಜೇನುಕೃಷಿಕ ರಾಧಾಕೃಷ್ಣ ಇವರು ಸಂಪನ್ಮೂಲವ್ಯಕ್ತಿಯಾಗಿ ಪಾಲ್ಗೊಂಡು ಜೇನು ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 92 ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ತೋಟಗಾರಿಕಾ ಅಧಿಕಾರಿ ಯುಗೇಂದ್ರ ಸ್ವಾಗತಿಸಿದರು. ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಪ್ರಸ್ತಾವನೆಗೈದರು. ಕೃ.ವಿ.ವಿ. ಕೇಂದ್ರದ ಕಾರ್ಯದರ್ಶಿ ದಯಾನಂದ ಭಟ್ ನಿರೂಪಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *