ಬಂಟ್ವಾಳ: ತಾಲೂಕಿನ ಬಾಳ್ತಿಲಗ್ರಾಮದ ಕುದ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ನಿಧಿಯಿಂದ 15 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕಟ್ಟಡ ಮತ್ತು ಶೌಚಾಲಯವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಯನ್ನು ರೂಪಿಸಿದೆ.ಇದರ ಜತೆಗೆ ಎಂ.ಆರ್.ಪಿ.ಎಲ್.ನಂತಹ ಸಂಸ್ಥೆಗಳು ಶಿಕ್ಷಣಕ್ಕೆ ವಿಶೇಷವಾದ ಕೊಡುಗೆಯನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ.ಕುದ್ರೆಬೆಟ್ಟು ಶಾಲೆಯ ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ಹಲವಾರು ಕಾರ್ಯಕ್ತಮಗಳನ್ನು ಹಾಕಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಗಮಿಸಿ ಶುಭಹಾರೈಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ,ತಾ.ಪಂ ಸದಸ್ಯೆ ಲಕ್ಷ್ಮಿ ಗೋಪಲಾಚಾರ್ಯ, ಎಂ ಆರ್ ಪಿ ಎಲ್ ನ ಹಣಕಾಸು ಅಧಿಕಾರಿ ಅಪರ್ಣಾ ಎಂ.ನಾಯಕ್,ಸಿಎಸ್ ಆರ್ ವಿಭಾಗದ ಮುಖ್ಯಸ್ಥೆ ವೀಣಾ,ಸಿಬ್ಬಂದಿ ವಿಕ್ರಮ್ ಅತಿಥಿಗಳಾಗಿ ಭಾಗವಹಿಸಿದ್ದರು.
ಗುತ್ತಿಗೆದಾರ ನಾಗೇಶ್,ದಾನಿಗಳಾದ ಮಹಮ್ಮದ್ ನಾಸೀರ್, ಸಿ.ಕೆ.ನವಾಜ್,ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತಾ ಬಿ.ಆರ್.,ಸುರೇಖಾ, ಸಿಆರ್ ಪಿ ಸತೀಶ್, ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ಸುನೀಲ್ ,ಅಬ್ದುಲ್ ಶುಕೂರ್,ಲೋಕಾನಂದ ಏಳ್ತಿಮಾರ್ ,ಶಿಕ್ಷಕಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಚೇತನಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ರೇಖಾ ವಂದಿಸಿದರು.ಹಿರಿಯ ವಿದ್ಯಾರ್ಥಿ ಸಂತೋಷ್ ಕುಮಾರ್ ಬೊಳ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಅಮರನಾಥ್ ಸಹಕರಿಸಿದರು.


