ಬಂಟ್ವಾಳ: ರಾ.ಹೆ.ಯ 75 ರಲ್ಲಿ ಬಿ.ಸಿ.ರೋಡಿನಿಂದ ಮಾಣಿ ವರೆಗೆ ಗುಂಡಿ ಮುಚ್ಚುವ ಕಾರ್ಯ ಗುರುವಾರ ಆರಂಭಗೊಂಡಿರುವ ಹಿನ್ನಲೆಯಲ್ಲಿ ರಾ.ಹೆ.ಯಲ್ಲಿ ಇಡೀ ದಿನ ಸಂಚಾರ ಅಸ್ತವ್ಯಸ್ತಗೊಂಡಿತು. ಬಿ.ಸಿ.ರೋಡಿನಿಂದ ಮಾಣಿವರೆಗೆ ಹೊಂಡಗುಂಡಿಗಳಿಂದಾಗಿ ವಾಹನ ಸಂಚಾರವೇ ದುಸ್ತರವಾಗಿತ್ತು.ವಿವಿಧ ಸಂಘಟನೆಗಳು,ಚಾಲಕ ಸಮುದಾಯ ಪ್ರತಿಭಟನೆ ನಡೆಸಿ ರಾ.ಹೆ.ಪ್ರಾ.ದ ಗಮನಸೆಳೆದಿತ್ತಲ್ಲದೆ,ಸಾಮಾಜಿಕ ಜಾಲತಾಣದಲ್ಲು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು.
ಬುಧವಾರವಷ್ಠೆ ಜಿಲ್ಲಾಧಿಕಾರಿಯವರು 10 ದಿನದೊಳಗಾಗಿ ಹೆದ್ದಾರಿ ಹೊಂಡ ಮುಚ್ಚಲು ತಾಕೀತು ಮಾಡಿದ ಬೆನ್ನಲ್ಲೆ ಬಿ.ಸಿ.ರೋಡಿನಿಂದ ಹೊಂಡಕ್ಕೆ ತೇಪೆ ಹಾಕುವ ಕಾರ್ಯ ಆರಂಭವಾಗಿದೆ. ಆದರೆ ಗುತ್ತಿಗೆ ವಹಿಸಿದ ಸಂಸ್ಥೆ ಸಂಚಾರಿ ಠಾಣೆಯಲ್ಲಿ ಪೂರ್ವನುಮತಿ ಪಡೆಯದೆ ಡಾಮಾರೀಕರಣ ಆರಂಭಿಸಿದರಿಂದ ವಾಹನ ಸಂಚಾರಕ್ಕೆ ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.
ಹೆದ್ದಾರಿ ಮಾತ್ರವಲ್ಲ,ಟ್ರಾಫಿಕ್ ತಪ್ಪಿಸಿ ಒಳದಾರಿಯಾಗಿ ವಾಹನಗಳು ಸಂಚರಿಸುವ ಧಾವಂತದಿಂದ ಪಾಣೆಮಂಗಳೂರಿನ ಒಳಪೇಟೆ ,ಹಳೇ ಸೇತುವೆ ಸಹಿತ ಎಲ್ಲಾರಸ್ತೆಗಳಲ್ಲು ಟ್ರಾಫಿಕ್ ಜಾಮ್ ನಿಂದಾಗಿ ವಾಹನಗಳು ತಾಸುಗಟ್ಟಲೇ ಸರತಿಯಲ್ಲಿ ನಿಲ್ಲಬೇಕಾಯಿತು. ಅಂಬ್ಯುಲೆನ್ಸ್ ಗಳು ಕೂಡ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಬೇಕಾಯಿತು.
ಕೊನೆಗೆ ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ ಐ ರಾಜೇಶ್ ಕೆ.ವಿ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳಾದ ಅವಿನಾಶ್,ಪ್ರಸನ್ನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು,ಹೋಂಗಾಡ್೯ ಸಿಬ್ಬಂದಿಗಳು ರಸ್ತೆಗಿಳಿದು ಹರಸಾಹಸಪಟ್ಟು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾದರು.


