ಬಂಟ್ವಾಳ:ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ನಡೆದ ಎರಡು ದಿನಗಳ ನಂತರ ಬಂಟ್ವಾಳದಲ್ಲಿ ಮತ್ತೋರ್ವ ಯುವಕನೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಯಾನೆ ಚೆನ್ನ ಫಾರೂಕ್(28) ಕೊಲೆಯಾದ ಯುವಕ.ಉಮರ್ ಫಾರೂಕ್ ಕಲ್ಲಡ್ಕದಿಂದ ಬೈಕ್ ನಲ್ಲಿ ನಂದಾವರ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈತನ ಆಪ್ತ ಸ್ನೇಹಿತರಾಗಿದ್ದವರೇ ಕೊಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಉಮರ್ ಫಾರೂಕ್ ಮತ್ತು ಮೂಲತಃ ಕಲ್ಲಡ್ಕದ, ಪ್ರಸಕ್ತ ನಂದಾವರದಲ್ಲಿ ವಾಸವಿರುವ ಮತ್ತೋರ್ವ ರೌಡಿ ಶೀಟರ್ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಕೆಲವು ಸಮಯದಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇಬ್ಬರ ನಡುವೆಯೂ ಆಗಾಗ ಮೊಬೈಲ್ ಫೋನಿನ ಮೂಲಕವು ವಾಗ್ವಾದ ನಡೆಯುತ್ತಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಉಮರ್ ಫಾರೂಕ್ ನಂದಾವರದಲ್ಲಿರುವ ಸ್ನೇಹಿತನಾಗಿದ್ದ ರೌಡಿ ಶೀಟರ್ ನ ತಂದೆಯ ಹೊಟೇಲ್ ಗೆ ಹೋಗಿ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಈತ ಸಂಜೆ ಉಮರ್ ಫಾರೂಕ್ ಗೆ ಕರೆ ಮಾಡಿ ನಂದಾವರಕ್ಕೆ ಬರುವಂತೆ ಕರೆದಿದ್ದ. ಅದರಂತೆ ಕಲ್ಲಡ್ಕದಿಂದ ಮೆಲ್ಕಾರ್ ಆಗಿ ನಂದಾವರಕ್ಕೆ ತೆರಳುತ್ತಿದ್ದ ಉಮರ್ ಫಾರೂಕ್ ನನ್ನು ಮೆಲ್ಕಾರ್ ಬಳಿ ಕಾರಿನಲ್ಲಿ ಕಾದು ಕುಳಿತಿದ್ದ ರೌಡಿ ಶೀಟರ್ ನ ತಂಡ ಉಮರ್ ಫಾರೂಕ್ ನನ್ನು ಹಿಂಬಾಲಿಸಿಕೊಂಡು ಬಂದು ಮೆಲ್ಕಾರ್ ಗೆ ಸಮೀಪದ ಬೋಗೋಡಿ ಎಂಬಲ್ಲಿ ದಾಳಿ ನಡೆಸಿ ಹತ್ಯೆ ನಡೆಸಿದೆ ಎನ್ನಲಾಗಿದೆ.
ಉಮರ್ ಫಾರೂಕ್ ತೆರಳುತ್ತಿದ್ದ ಬೈಕ್ ಗೆ ಕಾರಿನಿಂದ ಢಿಕ್ಕಿ ಹೊಡೆಸಿ ಅಪಘಾತ ನಡೆಸಿದ ಬಳಿಕ ತಂಡ ಉಮರ್ ಫಾರೂಕ್ ಮೇಲೆ ತಲವಾರಿನಿಂದ ಕಡಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಉಮರ್ ಫಾರೂಕ್ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿಮಧ್ಯೆ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅವಿವಾಹಿತನಾಗಿರುವ ಉಮರ್ ಫಾರೂಕ್ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿ ಕೇಶವ್ ಗೌಡ ಕೊಲೆ ಯತ್ನ ಪ್ರಕರಣ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಉಮರ್ ಫಾರೂಕ್ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು ರೌಡಿ ಶೀಟರ್ ಆಗಿದ್ದಾನೆ. ಘಟನೆಯ ಸುದ್ದಿ ತಿಳಿದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟಿನ್ ಡಿಸೋಜ , ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್,ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ, ಇನ್ಸ್ ಪೆಕ್ಟರ್ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ತನಿಖೆ ಮುಂದುವರಿದಿದೆ. ಎರಡು ದಿನಗಳ ಹಿಂದೆಯಷ್ಠೆ ನಟ ಸುರೇಂದ್ರ ಬಂಟ್ವಾಳ್ ನ ಕೊಲೆ ನಡೆದಿದ್ದು,ಪೊಲೀಸರು ಇದರ ತನಿಖೆ,ಹಂತಕರ ಪತ್ತೆ ಕಾರ್ಯದಲ್ಲಿ ಬಿಝಿಯಾಗಿದ್ದರು.ಈ ನಡುವೆ ಮೆಲ್ಕಾರ್ ನಲ್ಲಿ ಮತ್ತೋರ್ವ ರೌಡಿಶೀಟರ್ ಹತ್ಯೆಯಾಗಿದ್ದು, ಬಂಟ್ವಾಳದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಹತ್ಯಾ ಪ್ರಕರಣ ಬಂಟ್ವಾಳ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
