ಬಂಟ್ವಾಳ: ತಾನು ಶಾಸಕನಾದ ಬಳಿಕ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮೂಲಸೌಕರ್ಯ ಹೆಚ್ಚಿಸುವ ಕಾರ್ಯ ನಡೆಸಲಾಗಿದೆ, ಇದೀಗ ತಜ್ಞ ವೈದ್ಯರೊಂದಿಗೆ ಸಕಲ ಸೌಕರ್ಯದೊಂದಿಗೆ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆ ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯಾಚರಿಸುತ್ತಿದ್ದು, ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಅಪರಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ. ಇದರ ಫಲವಾಗಿಯೇ ಪ್ರಸ್ತುತ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿನ ಖಾಲಿ ಇದ್ದ ಎಲ್ಲಾ ತಜ್ಞ ವೈದ್ಯರು ಹುದ್ದೆಗಳನ್ನು ಭರ್ತಿಗೊಳಿಸಲಾಗಿದ್ದು, ಪ್ರಸ್ತುತ ಇವರು ರೋಗಿಗಳ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ ಎಂದರು.ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲದಂತೆ ತಾಲೂಕು ಸರಕಾರಿ ಆಸ್ಪತ್ರೆ ಕಾರ್ಯಾಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕರು,ತಜ್ಞ ವೈದ್ಯರಿಂದ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರದ ಅನುದಾನದಡಿ, ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಸಹಕಾರದಿಂದ ವಿವಿಧ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಮತ್ತು ಇತರೆ ಸೌಲಭ್ಯಗಳನ್ನು ಈ ಆಸ್ಪತ್ರೆಗೆ ಕಳೆದ 2 ವರ್ಷಗಳಲ್ಲಿ ಪೂರೈಸಲಾಗಿದೆ.
ಈಗಾಗಲೇ ಎಂ,ಆರ್,ಪಿ,ಎಲ್ ಸಂಸ್ಥೆಯಿಂದ ಒಂದು ಸುಸಜ್ಜ್ಜಿತ ಅಂಬ್ಯಲೆನ್ಸ್ , ಕ್ಯಾಡ್ ಸಂಸ್ಥೆ 5 ಇ.ಸಿ.ಜಿ. ಉಪಕರಗಳನ್ನು ನೀಡಿ ಸಹಕರಿಸಿದ್ದಾರೆ. ಮೃತದೇಹಗಳನ್ನು ಇರಿಸಲು ಅನುಕೂಲವಾಗುವಂತೆ 2 ಶೈತ್ಯಾಗಾರಗಳನ್ನು ಬಂಟ್ವಾಳ ಲಯನ್ಸ್ ಕ್ಲಬ್ ಮಂದಿನ ನವಂಬರ್ ನಲ್ಲಿ ಆಸ್ಪತ್ರೆಗೆ ಕೊಡುಗೆಯಾಗಿ ಒದಗಿಸಲಿದ್ದಾರೆ ಎಂದು ಅವರು ವಿವರಗಳನ್ನು ನೀಡಿದರು. ಕೋವಿಡ್ ಸಂದರ್ಭದಲ್ಲು ಆಸ್ಪತ್ರೆಯ ಎಲ್ಲಾ ವೈದ್ಯರು,ಸಿಬ್ಬಂದಿಗಳು ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದ್ದಲ್ಲದೆ ಅಭಿನಂದನೆ ಸಲ್ಲಿಸಿದರು.
ಪುಂಜಾಲಕಟ್ಟೆ ಮೇಲ್ದರ್ಜೆಗೆ:
ಆಸ್ಪತ್ರೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಬಹುದಿನಗಳ ಬೇಡಿಕೆಯಾಗಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಇದರ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳನ್ನು ಭರ್ತಿ ಮಾಡುವ ಕುರಿತಂತೆ ಸಚಿವರೊಂದಿಗೆ ಚರ್ಚಿಸಿದ್ದು, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಮಾಹಿತಿ ನೀಡಿದರು.

ಕೋವಿಡ್ ಸಂದರ್ಭದಲ್ಲು ಈ ಆಸ್ಪತ್ರೆಯ ಡಿಜಿಟಲ್ ಎಕ್ಸ್ ರೇ ಟಿ ಎಲ್ ಡಿ ಬ್ಯಾಡ್ಜ್, ಅಲ್ಟ್ರಾ ಸೌಂಡ್ ಮೆಶಿನ್, ಇಎನ್ ಟಿ ವರ್ಕ್ ಸ್ಟೇಶನ್, ದಂತ ವೈದ್ಯಕೀಯ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ, ಸೋಲಾರ್ ಪ್ಲಾಂಟ್, ನವಜಾತ ಶಿಶುಗಳಿಗೆ ವ್ಯವಸ್ಥೆ, ಸಿಸಿ ಕ್ಯಾಮರಾ, ಕೋವಿಡ್ ಟೆಸ್ಟ್ ಗೆ ಆಧುನಿಕ ವ್ಯವಸ್ಥೆ, ಇಸಿಜಿ, ಐದು ವೆಂಟಿಲೇಟರ್ ಗಳನ್ನು ಕಳೆದ ಎರಡು ವರ್ಷಗಳಲ್ಲಿ ಒದಗಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮಾಹಿತಿ ನೀಡಿದರು.
ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯಾಧಿಕಾರಿಗಳಿದ್ದು, ಹೆಚ್ಚುವರಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಂಟ್ವಾಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ,ಸಹಾಯಕ ಆಡಳಿತಾಧಿಕಾರಿ ಅನಿತಾ ಉಪಸ್ಥಿತರಿದ್ದರು.

