ಕೈಕಂಬ: `ಎಡಪದವು-ಕುಪ್ಪೆಪದವು ಮಾರ್ಗ ಮಧ್ಯೆ ತೆಂಕಎಡಪದವು ಗ್ರಾಮದ ಶಿಬ್ರಿಕೆರೆ ಎಂಬಲ್ಲಿ ಸಂಬಂಧಿಯ ಮನೆಯಲ್ಲಿರುವ ರಿಕ್ಷಾ ಚಾಲಕ ರವೀಂದ್ರ ನಾೈಕ್ ಎಂಬವರ ಸಹೋದರಿ ಮಲ್ಲಿಕಾ ಟಿ(31) ಕಿಡ್ನಿ ವೈಫಲ್ಯ ಹಾಗೂ ತಾಯಿ ರತ್ನಾ ನಾೈಕ್(68) ಪಾಶ್ರ್ವವಾಯು ಪೀಡಿತರಾಗಿ(ಲಕ್ವ) ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿದ್ದಾರೆ. ರತ್ನಾರಿಗೆ 2013ರಿಂದ ಮಂಗಳೂರಿನ ಅಳಪೆಯ ಡಾ. ಶಾಫಿಯವರು ಹಾಗೂ ಮಲ್ಲಿಕಾಗೆ 2015ರಿಂದ ಕಂಕನಾಡಿಯ ಡಾ. ಮಂಜುನಾಥ್ ಚಿಕಿತ್ಸೆ ನೀಡುತ್ತಿದ್ದಾರೆ. ಈಕೆಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಿದ್ದು, ಮಂಗಳೂರಿಗೆ ಹೋಗಿ ಬರುವುದೇ ಕಷ್ಟದಾಯಕವಾಗಿದೆ. ಈ ಕುಟುಂಬ ಮೂಲತಃ ಹತ್ತಿರದ ಬ್ರಿಂಡೇಲ್ನಲ್ಲಿ ಇತ್ತಾದರೂ, ತಾಯಿ ಮತ್ತು ಸಹೋದರಿಯ ಚಿಕಿತ್ಸೆ ನಿಮಿತ್ತ ಬಾವನ(ಸತೀಶ್ ಜಿ ನಾೈಕ್) ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಒಂದೆಡೆ ಕಿತ್ತು ತಿನ್ನುವ ಬಡತನ, ಜೊತೆಗೆ ಇಬ್ಬರು ಅನಾರೋಗ್ಯ ಪೀಡಿತರ ದೈನಂದಿನ ಪಾಲನೆಯೊಂದಿಗೆ ತಾನು ಗಂಜಿಮಠದಲ್ಲಿ ರಿಕ್ಷಾ ಬಾಡಿಗೆ ಹೊಡೆಯುತ್ತಿದ್ದೇನೆ. ಸಮಾಜದ ಮೇಲೆ ಪೂರ್ಣ ಭರವಸೆ ಹೊಂದಿರುವ ತನಗೆ ಈವರೆಗೆ ಸ್ಥಳೀಯ ಹಲವು ಸಂಘ-ಸಂಸ್ಥೆಗಳು, ಗಂಜಿಮಠ ಶ್ರೀ ಗಣೇಶ್ ರಿಕ್ಷಾ ಸ್ಟ್ಯೆಂಡ್ ರಿಕ್ಷಾ ಮಾಲಕ-ಚಾಲಕರು ಒಂದಷ್ಟು ಹಣಕಾಸಿನ ನೆರವಿನೊಂದಿಗೆ, ಪಡಿತರ ಒದಗಿಸಿದ್ದಾರೆ. ಕಳೆದ ಏಳು ವರ್ಷದಿಂದ ತಾಯಿ ಮತ್ತು ಸಹೋದರಿಗೆ ಸಾಲಸೋಲ ಮಾಡಿ ಸುಮಾರು 17 ಲಕ್ಷ ರೂ ಕರ್ಚು ಮಾಡಿದ್ದೇನೆ. ಇನ್ನಿವರ ಚಿಕಿತ್ಸೆಗೆ ತನ್ನೆದುರಿರುವ ಆಯ್ಕೆ ವಿಧಿ ಮತ್ತು ಸಮಾಜದ ನೆರವು ಎಂದು ರವೀಂದ್ರ ನಾಯ್ಕ್ ಹೇಳುತ್ತಾರೆ.
`ದೈವವೊಂದು ಬಗೆದರೆ ವಿಧಿ ಬೇರೆಯೇ ಬಗೆಯಿತು’ ಎಂಬಂತೆ ಈಗಿರುವ ಮನೆಯಲ್ಲಿ ಬಾವ ಸತೀಶ್ ಕೆಲಸ ಮಾಡದ ಸ್ಥಿತಿಯಲ್ಲಿದ್ದಾರೆ. 2015ರಲ್ಲಿ ಹೊಸ್ಮಾರಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾಗ ಮೂರಸ್ತಿನ ಕಟ್ಟಡದಿಂದ ಬಿದ್ದು ಕೈ-ಕಾಲಿನ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ. ಇವರ ಪುತ್ರ, ಆರನೇ ತರಗತಿಯ ತಿಲಕೇಶ್ ನಾಯ್ಕ್ಗೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿದೆ. ಕಡು ಬಡತನ ಹಾಗೂ ಚಿಕಿತ್ಸೆಯಲ್ಲೇ ನೊಂದ ಕುಟುಂಬಕ್ಕೆ ನೆರವಾಗಿವ ದಾನಿಗಳು ಮಲ್ಲಿಕಾ ಟಿ, ಎಸ್/ಬಿ ಎ/ಸಿ: 0657108020097, ಐಎಸ್ಎಫ್ಸಿ ಕೋಡ್ : ಸಿಎನ್ಆರ್ಬಿ0000657 ಸಂಪರ್ಕಿಸಬಹುದು. ದೂರವಾಣಿ ರವೀಂದ್ರ ನಾಯ್ಕ್ : 9632499820.
