ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನಲ್ಲಿ ಅಧಿಕಾರಿಗಳು, ಪಂಚಾಯತ್ ನಿಕಟಪೂರ್ವ ಸದಸ್ಯರು ಹಾಗೂ ಬಿಡ್ಡುದಾರರ ಮಧ್ಯೆ ನಡೆದ ಹೈ-ಡ್ರಾಮಾದ ಬಳಿಕ, ತಾಪಂ ಕಾರ್ಯನಿರ್ವಹಾಣಾಧಿಕಾರಿ(ಇಒ) ತಡೆಯಾಜ್ಞೆ ಆದೇಶ ಜಾರಿಯಲ್ಲಿರುವ ಹೊರತಾಗಿಯೂ ಇಒ ಎದುರೇ ಎಲ್ಲ 29 ಅಂಗಡಿಗಳ ಏಲಂ ಪ್ರಕ್ರಿಯೆ ನಡೆಯಿತು.21vp kandavara

ಗುರುಪುರ ಗ್ರಾಪಂಗೆ ಸೇರಿದೆ ಎನ್ನಲಾದ, ಗುರುಪುರ ಕೈಕಂಬ ಪೋಂಪೈ ಚರ್ಚ್ ಬಳಿ ಇರುವ ಮೀನು ಮಾರುಕಟ್ಟೆ ಹಾಗೂ ಕೆಲವು ಅಂಗಡಿಗಳು ಪ್ರಸಕ್ತ ಕಂದಾವರ ಗ್ರಾಪಂ ಅಧೀನದಲ್ಲಿರುವ ಕಾರಣ ಏಲಂ ಪ್ರಕ್ರಿಯೆಗೆ ತಾಪಂ ಇಒ ಆ. 19ರಂದು ತಡೆಯಾಜ್ಞೆ ನೀಡಿದ್ದರು.gur-aug-21-kandavara-3

ಶುಕ್ರವಾರ ಬೆಳಿಗ್ಗೆ ಕಂದಾವರ ಪಂಚಾಯತ್ ಪಿಡಿಒ ಮುಂದಾಳತ್ವದಲ್ಲಿ ಏಲಂ ಪ್ರಕ್ರಿಯೆ ನಡೆಯಲಿದೆ ಎಂಬ ಸುದ್ದಿ ತಿಳಿದ ಪಂಚಾಯತ್‍ನ ನಿಕಟಪೂರ್ವ ಜನಪ್ರತಿನಿಧಿಗಳು, ಜಿಪಂ ಸದಸ್ಯ, ತಾಪಂ ಸದಸ್ಯರು ಹಾಗೂ ಬಿಡ್ಡುದಾರರು ಕಂದಾವಾರ ಪಂಚಾಯತ್‍ನಲ್ಲಿ ಜಮಾಯಿಸಿದ್ದರು. ಏಲಂ ಪ್ರಕ್ರಿಯೆ ವೇಳೆ ತಾಪಂ ಇಒ ಜಾರಿಗೊಳಿಸಿದ ಆದೇಶ ಪ್ರಶ್ನಿಸಿ ಸಂಘರ್ಷ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿ ಪಂಚಾಯತ್ ಪರಿಸರದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

ಏಲಂ ನಡೆದರೆ ತಾಪಂ ಇಒ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಒಂದು ಬಣದ ಜನಪ್ರತಿನಿಧಿಗಳು ಅಧಿಕಾರಿಗಳೆದುರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಿವಾದವು ಪ್ರತಿಭಟನೆ ಹಂತ ತಲುಪುತ್ತಿದ್ದಂತೆ ತಾಪಂ ಇಒ ಸದಾನಂದ ಹಾಗೂ ಪಂಚಾಯತ್ ಆಡಳಿತಾಧಿಕಾರಿ ಸುಧಾಕರ್ ಪಂಚಾಯತ್‍ಗೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು.

ಏಲಂ ಪ್ರಕ್ರಿಯೆಗೆ ತಾನು ತಡೆಯಾಜ್ಞೆ ನೀಡಿರುವುದರಿಂದ ಆ. 25ರಂದು ವಿವಾದಿತ ಜಾಗ ಸರ್ವೆ ನಡೆಸಿ ಗಡಿ ಗುರುತು ಹಾಕಿ, ಏಲಂ ಪ್ರಕ್ರಿಯೆ ಮುಂದಿನ ದಿನ ನಿಗದಿಪಡಿಸಲಾಗುವುದು ಎಂದು ಇಒ ಸದಾನಂದ ತಿಳಿಸಿದರು.

ಇಷ್ಟಕ್ಕೆ ತಡೆಯಾಜ್ಞೆ ಪರವಾಗಿದ್ದ ಕೆಲವರು ಪಂಚಾಯತ್ ಪ್ರದೇಶದಿಂದ ತೆರಳಿದರು. ಆದರೆ ಏಲಂ ನಡೆಯಲೇ ಬೇಕು ಎಂದು ಆಗ್ರಹಿಸಿ ಮತ್ತೊಂದು ಬಣದ ಬೇಡಿಕೆಗೆ ಮಣಿದ ಇಒ, ಸುಮಾರು ಎರಡು ತಾಸಿನ ಬಳಿಕ ಪಂಚಾಯತ್ ಆವರಣದಲ್ಲಿ ಅಂಗಡಿಗಳ ಏಲಂಗೆ ಅವಕಾಶ ನೀಡಿ ತೆರಳಿದರು. ಪಿಡಿಒ ಯಶವಂತ್ ಹಾಗೂ ಸಿಬ್ಬಂದಿ ವರ್ಗ ಏಲಂ ಪ್ರಕ್ರಿಯೆಗೆ ಸಹಕರಿಸಿತು.

“ಆ. 25ರ ಬಳಿಕ ಏಲಂ ಪ್ರಕ್ರಿಯೆ ನಡೆಯಲಿದೆ ಎಂದು ಜನರಿಗೆ ಮಾಹಿತಿ ನೀಡಿದ ಬಳಿಕ ತಡೆಯಾಜ್ಞೆ ಪರವಾಗಿದ್ದ ಒಂದು ಬಣದ ಮುಖಂಡರು ಮತ್ತು ಹೆಚ್ಚಿನ ಬಿಡ್ಡುದಾರರು ಪಂಚಾಯತ್ ಆವರಣದಿಂದ ತೆರಳಿದ್ದರು. ಇದಾದ ಬಳಿಕ ಯಾವುದೋ ಪ್ರಭಾವಕ್ಕೆ ಮಣಿದ ಅದೇ ಇಒ ಮತ್ತು ಪಿಡಿಒರವರು ಆ. 21ರಂದೇ ಕಾನೂನುಬಾಹಿರ ಏಲಂ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದರು. ಇದು ನ್ಯಾಯ ಸಮ್ಮತ ನಿರ್ಧಾರವಲ್ಲ, ಕಾನೂನಿನ ಸ್ಪಟ್ ಉಲ್ಲಂಘನೆ” ಎಂದು ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದರು.

“ಕಾನೂನು ವ್ಯಾಪ್ತಿಯಲ್ಲೇ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಏಲಂ ಪ್ರಕ್ರಿಯೆ ಕಾನೂನು ಚೌಕಟ್ಟು ಮೀರಿಲ್ಲ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಆರೋಪಗಳು ಕೇಳಿ ಬರುತ್ತವೆ” ಎಂದು ಪಿಡಿಒ ಯಶವಂತ್ ಹೇಳಿದರು.

By Suddi9

Leave a Reply

Your email address will not be published. Required fields are marked *