ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ಮುಳುಗಡೆ ಪ್ರದೇಶದ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯಕರ ಜೊತೆ ಚರ್ಚಿಸಿ 10 ದಿನದೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತರ ಸಭೆ ನಡೆಸುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ ಎಂದು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಕಂದಾಯ ಸಚಿವರಾದ ಆರ್.ಆಶೋಕ್ ಅವರು ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ವರತೆ ಪ್ರದೇಶ ಸೇರಿಸಿ ಮುಳುಗಡೆ ಭೂಮಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಹಾಗೆಯೇ ವರತೆ ಪ್ರದೇಶ ಸೇರಿಸಿ ಮುಳುಗಡೆ ಭೂಮಿಗೆ ನ್ಯಾಯೋಚಿತ ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಆರಂಭಿಸುವಂತೆ ಸೂಚಿಸಿದ್ದರೂ, ಈ ತನಕ ಸರ್ವೇ ಕಾರ್ಯ ಆಗದೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಂಗಳವಾರ ಮಂಗಳೂರಿನಲ್ಲಿರುವ ಅವರ ಕಚೇರಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ರೈತರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಸಚಿವರು ಶಾಸಕ ರಾಜೇಶ್ ನಾಯಕರ ಜೊತೆ ಚರ್ಚಿಸಿ 10 ದಿನದೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತರ ಸಭೆ ನಡೆಸಿ ರೈತರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತಿದ್ದಾರೆ ಎಂದು ಸುಬ್ರಹ್ಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
