ಉಡುಪಿ: ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ಶವದ ವಾರಸುದಾರರು ಪತ್ತೆಯಾಗದೆ ಇರುವುದರಿಂದ, ಶಿರ್ವ ಪೊಲೀಸರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರ ಪಡೆದು, ಬೀಡಿಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತಿಮ ಗೌರವದೊಂದಿಗೆ ಮಂಗಳವಾರ ನಡೆಸಿದರು. ಶಿರ್ವ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀಧರ್ ಕೆ.ಜೆ, ಸಿಬ್ಬಂದಿ ಸುಮಿತ್ರ ಉಪಸ್ಥಿತರಿದ್ದರು. ಸಮಾಜಸೇವಕರಾದ ರಾಮದಾಸ್ ಪಾಲನ್, ತಾರಾನಾಥ್ ಮೇಸ್ತ ಶಿರೂರು ಅವರು ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಶ್ರಮದಾನದ ಮೂಲಕ ಸಹಕರಿಸಿದರು. ಇದು ವಿಶು ಶೆಟ್ಟಿ ಅಂಬಲವಾಡಿ ಅವರು ನಡೆಸಿರುವ 111ನೇ ವಾರಸುದಾರರಿಲ್ಲದ ಅಂತ್ಯಸಂಸ್ಕಾರ ಎಂದು ತಿಳಿದು ಬಂದಿದೆ.
ಕಳತ್ತೂರು ಗ್ರಾಮದ ಚಂದ್ರನಗರ ಬಸ್ಸು ನಿಲ್ದಾಣದಲ್ಲಿ ಅಪರಿಚಿತ ವೃದ್ದರ ಶವವು ಜು.18 ರಂದು ಕಂಡು ಬಂದಿತ್ತು. ಮೃತ ವ್ಯಕ್ತಿಯು ವಲಸೆ ಕಾರ್ಮಿಕನಾಗಿದ್ದು, ಕಳೆದ 30 ವರ್ಷಗಳಿಂದ ಗ್ರಾಮದ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನ ಪೂರ್ವಾಪರ ವಿಳಾಸದ ಮಾಹಿತಿಯು ಸ್ಥಳಿಯರಿಗೆ ತಿಳಿದಿರಲಿಲ್ಲ. ಶವವನ್ನು ಶಿರ್ವ ಪೊಲೀಸರು ವಾರಸುದಾರರ ಬರುವಿಕೆಗಾಗಿ ಮಣಿಪಾಲ ಆಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಟ್ಟಿದ್ದರು. ಮಾಧ್ಯಮ ಪ್ರಕಟಣೆ ನೀಡಿ ಹತ್ತು ದಿನಗಳು ಕಳೆದರೂ, ವಾರಸುದಾರರು ಸಂಪರ್ಕಿಸದೆ ಇರುವುದರಿಂದ, ಕಾನೂನು ಪ್ರಕ್ರಿಯೆ ಮೂಲಕ ಅಂತ್ಯಸಂಸ್ಕಾರ ನಡೆಸಬೇಕಾಯಿತು.
