ಬಂಟ್ವಾಳ: ಇಲ್ಲಿನ ಪುರಸಭೆಯ ಮಹಿಳಾ ಸಿಬ್ಬಂದಿಯೋರ್ವರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಬುಧವಾರ ಜು.೨೯ ರಂದು ಪುರಸಭಾ ಕಚೇರಿ ಸೀಲ್ ಡೌನ್ ಆಗಲಿದೆ. ಪುರಸಭಾ ವ್ಯಾಪ್ತಿಯಲ್ಲಿ ಮಂಗಳವಾರ 7 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡ ಬಗ್ಗೆ ಜಿಲ್ಲಾಡಳಿತ ಹೊರಡಿಸಿದ್ದ ಮಾಹಿತಿಯಲ್ಲಿ ತಿಳಿಸಲಾಗಿತ್ತು.ಈ ನಡುವೆ ಪುರಸಭೆಯ ಮಹಿಳಾ ಸಿಬ್ಬಂದಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳವಾರ ಅವರ ಗಂಟಲುದ್ರವ ಪರೀಕ್ಷೆ ನಡೆಸಲಾಗಿದ್ದು,ಇದೀಗ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.ಈ ಹಿನ್ನಲೆಯಲ್ಲಿ ಬುಧವಾರ ಪುರಸಭಾ ಕಚೇರಿಯನ್ನು ಮುಂಜಾಗೃತಾಕ್ರಮವಾಗಿ ಸ್ಯಾನಟೈಸ್ ಮಾಡಲಾಗುತ್ತಿದ್ದು , ಒಂದು ದಿನ ಸಾರ್ವಜನಿಕರಿಗೆ ಪುರಸಭಾ ಕಚೇರಿಗೆ ಪ್ರವೇಶವಿರುವುದಿಲ್ಲ ಎಂದು ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ತಿಳಿಸಿದ್ದಾರೆ. 
ಎರಡು ಸಾವು :
ಬಂಟ್ವಾಳ ತಾಲೂಕಿನ ಇಬ್ಬರು ಕೊರೋನ ಸೋಂಕಿಗೆ ಮಂಗಳವಾರ ಮೃತಪಟ್ಟಿರುವ ಬಗ್ಗೆ ಜಿಲ್ಲಾಧಿಕಾರಿಯವರ ಮಾಹಿತಿಯಲ್ಲಿ ತಿಳಿಸಲಾಗಿದೆ. ಹಾಗೆಯೇ ತಾಲೂಕಿನಲ್ಲಿ ಒಟ್ಟು ೨೯ ಮಂದಿಗೆ ಕೊರೋನ ಸೋಂಕು ತಗಲಿದೆ. ತಾಲೂಕಿನ ಪುದುಗ್ರಾಮದ ಕುಂಪನಮಜಲಿನ ೬೨ ವರ್ಷದ ಪುರುಷ ಮತ್ತು ನರಿಕೊಂಬುಗ್ರಾಮದ ೨೫ ವರ್ಷದ ಮಹಿಳೆ ಮೃತಪಟ್ಟವರಾಗಿದ್ದಾರೆ.ವಿಟ್ಲ ಕಸ್ಬಾದ ಮೂವರು, ಸರಪಾಡಿಯ ಮೂವರು, ನಾವೂರಿನ ಮೂವರು, ಪಾಣೆಮಂಗಳೂರಿನ ಮೂವರು, ಬಿ.ಮೂಡದ ಇಬ್ಬರು, ಬಂಟ್ವಾಳ ಕರಿಯಂಗಳ, ನರಿಕೊಂಬು, ಕೊಡ್ಮಣ್ಣೂರು, ನೆಹರೂನಗರ, ಕೊಳತ್ತಮಜಲು, ವಿಟ್ಲಮುಡ್ನೂರು, ವಿಟ್ಲಪಡ್ನೂರು, ಮುರುವ, ಕೊಡಂಬೆಟ್ಟು, ಮಣಿಹಳ್ಳ, ತುಂಬೆ, ಫರಂಗಿಪೇಟೆ, ವಿಟ್ಲ, ಅಮ್ಮುಂಜೆಯ ತಲಾ ಒಬ್ಬರಿಗೆ ಸೋಂಕು ತಗಲಿದೆ.
24ಗಂಟೆ ವಾಮದಪದವು ಸ.ಆ.ಕೇ. ಬಂದ್ :
ವಾಮದಪದವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ (ಜು. 29) ರಂದು ಕೊರೋನಾ ಮಹಾಮಾರಿಯ ವಿರುದ್ಧ ಮುಂಜಾಗೃತಕ್ರಮವಾಗಿ ‘ಸ್ಯಾನಿಟೈಸರ್’ ಮಾಡಲಿರುವುದರಿಂದ 24 ಕಾಲ ಬಂದ್ ಇರಲಿದೆ.ಹಾಗಾಗಿ ಈ ಸಮಯದಲ್ಲಿ ಯಾವುದೇ ಹೊರರೋಗಿ ಅಥವಾ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದಿಲ್ಲ ಸಾರ್ವಜನಿಕರು ಸಹಕರಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.
