ಮಂಗಳೂರು: ಧರ್ಮಸ್ಥಳದ ಪಾಂಗಳ ನಿವಾಸಿ ಎಸ್ ಡಿಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಅಕ್ಟೋಬರ್ 9ಕ್ಕೆ ಎರಡು ವರ್ಷ ಪೂರ್ತಿಯಾಗುತ್ತದೆ. ಪೊಲೀಸ್ ತನಿಖೆಯಿಂದ ನ್ಯಾಯ ಸಿಕ್ಕಿಲ್ಲ ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದ ಬಳಿಕ ರಾಜ್ಯ ಸರಕಾರ ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಆದರೆ ಸಿಬಿಐ ತನಿಖೆ ಪ್ರಾರಂಭಗೊಂಡು ವರ್ಷ ದಾಟುತ್ತಿದ್ದರೂ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳು ಸಿಕ್ಕಿಬಿದ್ದಿಲ್ಲ ಎಂಬ ಸಾರ್ವಜನಿಕರ ಆರೋಪ ಇನ್ನೂ ಜೀವಂತವಾಗಿದೆ. ಈ ನಡುವೆ ಪ್ರಜಾಪ್ರಭುತ್ವ ವೇದಿಕೆ ಹಾಗೂ ಕೇಮಾರು ಶ್ರೀಗಳ ನೇತೃತ್ವದಲ್ಲಿ ಅಕ್ಟೋಬರ್ 10ರಂದು ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ನವಚಂಡಿಕಾ ಯಾಗ ನಡೆಯಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹಾಗೂ ಉಡುಪಿ ಜಿಲ್ಲೆಯ 11 ಮಂದಿ ಸ್ವಾಮೀಜಿಗಳ ಉಪಸ್ಥಿತಿ ಇರಲಿದೆ. ಕೊಲ್ಲೂರು ದೇವಳದ ಪ್ರಧಾನ ಅರ್ಚಕ ಮಂಜುನಾಥ ಅಡಿಗ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿ, ಬಾಳೇಕುದ್ರುವಿನ ನರಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾತಾನಂದಮಯೀ, ಕಾರಿಂಜ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಕೊಲ್ಲೂರು ಧರ್ಮಪೀಠದ ಸ್ವಾಮೀಜಿ, ಸಾಧ್ವಿ ಗೀತಾನಂದಿನಿ, ಮರವೂರು ನಿತ್ಯಾನಂದಾಶ್ರಮ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಧರ್ಮ ವ್ರತಾನಂದ ಸ್ವಾಮೀಜಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ ಮುಂತಾದವರು ಯಾಗವನ್ನು ನಡೆಸಲಿದ್ದಾರೆ.
ಮುಂಜಾನೆ ಎಂಟು ಗಂಟೆಗೆ ಪ್ರಾರಂಭವಾಗುವ ಯಾಗವು ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿಯ ಮೂಲಕ ಮುಕ್ತಾಯವಾಗಲಿದ್ದು, 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಸಭೆ ನಡೆಯಲಿದೆ. ಚಿಕ್ಕಮಗಳೂರಿನ ಧಾರ್ಮಿಕ ಗುರು ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಏನಿದು ನವಚಂಡಿಕಾ ಯಾಗ?
1500 ವರ್ಷಕ್ಕೂ ಹಿಂದೆ ಸ್ತ್ರೀ ರಕ್ಷಣೆ ಹಾಗೂ ಸಮಾಜದಲ್ಲಿ ಹೆಣ್ಣುಮಕ್ಕಳ ಸಮ್ಮಾನಕ್ಕಾಗಿ ಮಾಡಿದ್ದರೆನ್ನಲಾದ ನವಚಂಡಿಕಾ ಯಾಗಕ್ಕೆ ಬಹಳಷ್ಟು ಮಹತ್ವವಿದೆ. ಬೆಳ್ತಂಗಡಿಯಲ್ಲಿ ನಡೆಯುವ ಯಾಗಕ್ಕೂ 11 ಅಗ್ನಿಕುಂಡವನ್ನು ರಚಿಸಲಾಗಿದ್ದು, 11 ಮಂದಿ ಸ್ವಾಮೀಜಿಗಳು ಯಾಗವನ್ನು ನೆರವೇರಿಸಲಿದ್ದಾರೆ. 1008 ಮಂದಿ ಮುತ್ತೈದೆಯರು ಯಾಗದಲ್ಲಿ ಹವಿಸ್ಸನ್ನು ಅರ್ಪಿಸಲಿದ್ದು ಯಾಗಕ್ಕಾಗಿ ಸರ್ವ ಸಿದ್ಧತೆಯನ್ನೂ ಮಾಡಲಾಗಿದೆ. ನವಚಂಡಿಕಾ ಯಾಗವನ್ನು ಹೆಣ್ಣುಮಕ್ಕಳ ರಕ್ಷಣೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆಸಲಾಗುತ್ತಿದ್ದು ನಾಡಿನೆಲ್ಲೆಡೆಯಿಂದ 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ನವಚಂಡಿಕಾ ಯಾಗವು ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ
`ಸ್ತ್ರೀಯರ ರಕ್ಷಣೆ, ಲೋಕ ಕಲ್ಯಾಣ ಯಾಗದ ಉದ್ದೇಶ’
ಈಶ ವಿಠಲದಾಸ ಸ್ವಾಮೀಜಿ, ಕೇಮಾರು
`ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಿತ್ಯ ಅತ್ಯಾಚಾರ, ಲೈಂಗಿಕ ಶೋಷಣೆ ನಡೆಯುತ್ತಲೇ ಇದೆ. ಧರ್ಮಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ಘಟಿಸಿದ್ದ ಸೌಜನ್ಯ ಎಂಬ ಬಾಲೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಇದರಿಂದ ಜನರಲ್ಲಿ ಭಯಗ್ರಸ್ಥ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಮನೆಯಿಂದ ಹೊರಗೆ ಹೋಗುವ ಹೆಣ್ಣುಮಕ್ಕಳು ಇಂದಿನ ಸ್ಥಿತಿಯಲ್ಲಿ ಕ್ಷೇಮವಾಗಿ ಮನೆಗೆ ಸೇರುತ್ತಾರೆಂಬ ಧೈರ್ಯ ಯಾರಲ್ಲೂ ಇಲ್ಲ. ಹೀಗಾಗಿ ಸಮಾಜದಲ್ಲಿ ಹೆಚ್ಚುತ್ತಿರುವ ರಾಕ್ಷಸೀ ಕೃತ್ಯ ಮತ್ತು ಮನುಷ್ಯನಲ್ಲಿ ವಿಜೃಂಭಿಸುತ್ತಿರುವ ರಾಕ್ಷಸೀತನ ತಡೆಯಲು ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ.
ಸಮಾಜದಲ್ಲಿ ಹೆಣ್ಣುಮಕ್ಕಳು, ಸ್ತ್ರೀಯರು ಗೌರವ ಮತ್ತು ಸಮ್ಮಾನದೊಂದಿಗೆ ಬದುಕಲು ಅವಕಾಶ ಕಲ್ಪಿಸುವುದೇ ಯಾಗದ ಪ್ರಧಾನ ಉದ್ದೇಶವಾಗಿದೆ. ಮಾತೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಾಗಕ್ಕೆ ಹವಿಸ್ಸು ಅರ್ಪಿಸಿ ಯಾಗದ ಯಶಸ್ಸಿಗೆ ಕಾರಣೀಕರ್ತರಾಗಬೇಕು’



