ಕುಪ್ಪೆಪದವು: ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಕಿಲೆಂಜಾರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮನೆಗಳಿಗೆ ಸಂಪರ್ಕಕ್ಕಾಗಿ ಮೀಸಲಿರಿಸಲಾದ ಜಾಗ ಅತಿಕ್ರಮಿಸಿ, ಪಂಚಾಯತ್ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ನಿರ್ಮಿಸಲಾದ ಮನೆ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿ ಎರಡು ವರ್ಷವಾದರೂ, ಇದುವರೆಗೆ ಕೋರ್ಟ್ ಆದೇಶ ಕಾರ್ಯಗತಗೊಳಿಸದ ತಹಶೀಲ್ದಾರ್ ಹಾಗೂ ಸ್ಥಳೀಯಾಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ ಪಾಕಾಜೆ ನಿವಾಸಿಗರು ಇನ್ನಾದರೂ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಪ್ರಕರಣದ ವಿವರ :
1960ರಲ್ಲಿ ಕೂರಂಬಿಲ ಮತ್ತು ಲಿಂಗು ನಾಯ್ಕ್ ಎಂಬವರಿಗೆ ಸರ್ಕಾರ ಕ್ರಮವಾಗಿ 96 ಮತ್ತು 51 ಸೆಂಟ್ಸ್ ಜಾಗ ಮಂಜೂರು ಮಾಡಿತ್ತು. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಎಂಟು ಸೆಂಟ್ಸ್ ಜಾಗ ಕಾಯ್ದಿರಿಸಲಾಗಿತ್ತು. ರಸ್ತೆಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಅಬ್ದುಲ್ ರಹಿಮಾನ್ ಯಾನೆ ಅದ್ದು ಎಂಬವರು ಮನೆ ನಿರ್ಮಿಸಿದ್ದರು. 2016ರಲ್ಲಿ ಗಣೇಶ್ ಪಾಕಾಜೆ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಗೆ ನೀಡಿದ ದೂರಿನಂತೆ, ಅನಧಿಕೃತವಾಗಿ ನಿರ್ಮಿಸಿದ ಮನೆ ತೆರವುಗೊಳಿಸುವಂತೆ ಮಂಗಳೂರು ತಹಶೀಲ್ದಾರ್‍ಗೆ ವರದಿ ಮೂಲಕ ಸೂಚಿಸಿತ್ತು. ಬಳಿಕ ಮನೆ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸು ಜಾರಿ ಮಾಡಿದ್ದು, ಅದ್ದು ಅವರು ಹೈಕೋರ್ಟಿಗೆ ಹೋಗಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಕ್ರಮ ಮನೆ ತೆರವುಗೊಳಿಸಿ ರಸ್ತೆ ನಿರ್ಮಿಸುವಂತೆ 2018ರಲ್ಲಿ ತಹಿಶೀಲ್ದಾರ್‍ಗೆ ಆದೇಶಿಸಿತ್ತು. ಆದರೆ ಕೋರ್ಟ್ ಆದೇಶ ಇದುವರೆಗೆ ಪಾಲನೆಯಾಗಿಲ್ಲ ಎಂದಿರುವ ಗಣೇಶ್ ಪಾಕಾಜೆ, “ಅಧಿಕಾರಿಗಳಿಂದ ನ್ಯಾಯಾಲಯದ ಉಲ್ಲಂಘನೆಯಾಗಿದೆ” ಎಂದು ದೂರಿದ್ದಾರೆ.
ಈ ಹಿಂದೆ ಪಂಚಾಯತ್‍ನಲ್ಲಿ ತೆಗೆದುಕೊಂಡ ನಿರ್ಣಯ ತಿರುಚಿ ದಾಖಲೆಪತ್ರ ಸಿದ್ಧಪಡಿಸಲಾದ ಅಂಶಗಳು ಕಂಡು ಬಂದಿವೆ. ಇದರಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕುಮ್ಮಕ್ಕು ಇದೆ. ಇಲ್ಲವಾದಲ್ಲಿ ಹೈಕೋರ್ಟ್ ಆದೇಶ ಈವರೆಗೆ ಯಾಕೆ ಪಾಲನೆಯಾಗಿಲ್ಲ ಎಂದಿರುವ ಪಾಕಾಜೆ, “ಸಂತ್ರಸ್ತರಾಗಬಹುದಾದ ಅಬ್ದುಲ್ ರಹಿಮಾನ್ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂಬುದು ನನ್ನ ಬೇಡಿಕೆಯೂ ಆಗಿದೆ” ಎಂದಿದ್ದಾರೆ.
“ಸೂಕ್ತ ಪ್ರದೇಶದಲ್ಲಿ ನಿವೇಶನ ಗುರುತಿಸಿದರೆ ಆಗಬಹುದು. ಅಲ್ಲಿ ನೀರು, ವಿದ್ಯುತ್, ರಸ್ತೆ ಸಂಪರ್ಕ ಇರಬೇಕು. ಆದರೆ ಇದಕ್ಕೆ ಇನ್ನೂ ಕೆಲವು ಸಮಯ ಯೋಚಿಸಬೇಕಾಗುತ್ತದೆ” ಎಂದು ಅಬ್ದುಲ್ ರಹಿಮಾನ್ ಯಾನೆ ಅದ್ದು ಹೇಳಿದರು.
“ಹೈಕೋರ್ಟ್ ಆದೇಶ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದೇವೆ. ತಾಲೂಕು ಪಂಚಾಯತ್ ಸಿಇಒ ಸ್ಥಳ ಪರಿಶೀಲನೆ ನಡೆಸಿದ್ದು, ಮನೆ ಕಳೆದುಕೊಳ್ಳುವ ವ್ಯಕ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸುವ ಕೆಲಸ ಮಾಡಬೇಕೆಂದು ಕುಪ್ಪೆಪದವು ಗ್ರಾಮ ಲೆಕ್ಕಾಧಿಕಾರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಈಗ ಮತ್ತೊಂದು ಸುತ್ತಿನ ಪರಿಶೀಲನೆ ನಡೆಯುತ್ತಿದೆ” ಎಂದು ಉಪ-ತಹಶೀಲ್ದಾರ್ ಶಿವಪ್ರಸಾದ್ ತಿಳಿಸಿದರು.
