ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸುಮಾರು 2000 ಎಕರೆ ಕೃಷಿ ಭೂಮಿಗೆ ನೀರುಣಿಸುವ 45 ಕೋಟಿ ರೂಪಾಯಿಗಳ ನೇತ್ರಾವತಿ ನದಿ ಏತ ನೀರಾವರಿ ಯೋಜನೆಯ ಮಂಜೂರಾತಿಗಾಗಿ ಕಲ್ಲಡ್ಕದ ಡಾ| ಪ್ರಭಾಕರ ಭಟ್ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನೇತ್ರಾವತಿ ನದಿ ದಂಡೆಗೆ ತಾಗಿಕೊಂಡು ಇರುವ ಈ ಬಾಳ್ತಿಲ ಗ್ರಾಮವು ಒಟ್ಟು 3,943 ಎಕರೆಗಳಾಗಿದ್ದು 6272 ಜನಸಂಖ್ಯೆಯನ್ನು 1300 ಕುಟುಂಬಗಳನ್ನು ಹೊಂದಿದ್ದು ಈ ಭಾಗದ ಜನರ ಬಹುದಿನಗಳ ನಿರೀಕ್ಷೆಯೊಂದು ಇದೀಗ ಕೈಗೂಡಿದಂತಾಗಿದೆ. ಈ ಯೋಜನೆಯಿಂದ ರೈತರ ಜಮೀನಿಗೆ ನೇರವಾಗಿ ನೀರನ್ನು ಹರಿಯ ಬಿಡುವುದಲ್ಲದೇ ಕೆರೆ ಬಾವಿ ಹಾಗೂ ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ಒಟ್ಟು ಅಂತರ್ಜಲದ ಮಟ್ಟವು ಮೇಲೇರಲಿದೆ ಹಾಗೂ ಇಡೀ ಗ್ರಾಮ ಹಚ್ಚಹಸಿರಾಗಲಿದೆ.
ಮುಖ್ಯಮಂತ್ರಿಗಳನ್ನು ಭೇಟಿಮಾಡಿದ ನಿಯೋಗದಲ್ಲಿ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯಕ್, ಮಾಜಿ ಶಾಸಕರಾದ ಶ್ರೀ ರುಕ್ಮಯ ಪೂಜಾರಿ, ಶ್ರೀ ಪದ್ಮನಾಭ ಕೊಟ್ಟಾರಿ ಹಾಗೂ ಗ್ರಾಮಸ್ಥರಾದ ಶ್ರೀ ಗೋಪಾಲ ಶೆಣೈ ಮತ್ತಿತರರು ಜೊತೆಗಿದ್ದರು.
