ಬಂಟ್ವಾಳ: ಬಂಟ್ವಾಳ ಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ ಗುರುವಾರ ಗುಂಪು ಸೇರಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಇಲ್ಲಿನ 30ಕ್ಕೂ ಅಧಿಕ ಮಂದಿಯ ವಿರುದ್ದ ಬಂಟ್ವಾಳನಗರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.ಸೀಲ್ ಡೌನ್ ಏರಿಯಾದ ಇನ್ಸಿಡೆಂಟ್ ಕಮಾಂಡರ್, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈ ಗೊಳ್ಳಲಾಗುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ. ಬಂಟ್ವಾಳ ಠಾಣಾಧಿಕಾರಿಯವರ ದೂರವಾಣಿ ಮಾಹಿತಿಯ ಹಿನ್ನೆಲೆಯಲ್ಲಿ ತಹಶೀಲ್ದಾರರು ಗುರುವಾರ ಅಪರಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಪರಿಶೀಲಿಸಲು ಬಂಟ್ವಾಳ ಪೇಟೆಯ ಸ್ಥಳಕ್ಕೆ ಭೇಟಿ ನೀಡಿದಾಗ ಕಂಟೈನ್ ಮೆಂಟ್ ಝೋನ್ ಒಳಗೆ ಜನ ಗುಂಪು ಸೇರಿದ್ದು, ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿದಂತೆ ಸೋಂಕು ಕಂಡು ಬಂದ ಬಂಟ್ವಾಳ ಪೇಟೆ ಪ್ರದೇಶದ ವ್ಯಾಪ್ತಿಯನ್ನು ಮೇ.9 ರಂದು ಕಂಟೈನ್ ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿಯವರು ಘೋಷಿಸಿದ್ದ ಅಧಿಸೂಚನೆಯನ್ನು ಇಲ್ಲಿ ಗುಂಪು ಸೇರಿದ್ದ ಜನರು ಉಲ್ಲಂಘಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.
