ಕೋಲಾರ: ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿ ರೈತಸಂಘದಿಂದ ಎಪಿಎಂಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಮನವಿ ನೀಡಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸಾವಿರಾರು ಎಕರೆಗಳಲ್ಲಿ ಬೆಳೆದಿರುವ ಟೊಮೆಟೊ ಉತ್ತಮ ಫಸಲು ಬಂದಿದ್ದರೂ ಕೊರೊನಾ ವೈರಸ್ ಹಾವಳಿಯಿಂದ ಮಾರುಕಟ್ಟೆಯಲ್ಲಿ ಖರೀದಿದಾರರ ಜೊತೆಗೆ ಹೊರರಾಜ್ಯಗಳಿಗೆ ರಫ್ತು ಮಾಡಲು ಲಾಕ್ಡೌನ್ನಿಂದ ಬೆಳೆಗಾರರು ಅಲ್ಲೋಲಕಲ್ಲೋಲವಾಗಿದ್ದಾರೆ ಎಂದು ಹೇಳಿದರು.

ಮತ್ತೊಂದು ಕಡೆ ಒಂದು ಎಕರೆ ಟೊಮೆಟೊ ಬೆಳೆಯಲು ಒಂದು ಲಕ್ಷದಿಂದ ಒಂದೂವರೆ ಲಕ್ಷ ಖರ್ಚು ಬರುತ್ತಿದೆ. ಆದರೆ ತೋಟದಲ್ಲಿನ ಟೊಮೆಟೊ ಮಾರುಕಟ್ಟೆಗೆ ತಂದರೆ ಕೊಳ್ಳುವರಿಲ್ಲ. ಅದರ ಜೊತೆಗೆ ಇರುವ ಬೆಲೆಯಿಂದಾಗಿ ಬಾಡಿಗೆ ಮತ್ತು ಕೂಲಿ ಸಹ ಬಾರದ ಪರಿಸ್ಥಿತಿಯಲ್ಲಿ ರೈತನಿದ್ದಾನೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ವತಿಯಿಂದ ಇಲ್ಲವೇ ಎಪಿಎಂಸಿ ಆವರ್ತ ನಿಧಿಯಲ್ಲಿರುವ ಹಣದಿಂದಲಾದರೂ ಟೊಮೆಟೊಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೇಲೆ ಒತ್ತಡ ಹಾಕಿದರು.

ರೈತ ಮಂಗಸಂದ್ರ ವೆಂಕಟೇಶಪ್ಪ ಮಾತನಾಡಿ, ಒಂದು ಕಡೆ ಹಾಕಿದ ಬಂಡವಾಳ ಬರುತ್ತಿಲ್ಲ. ಮತ್ತೊಂದು ಕಡೆ ಮತ್ತೆ ಬೆಳೆಯಿಡಲು ಸಾಲ ಸಿಗುತ್ತಿಲ್ಲ. ಹಾಕಿರುವ ಖಾಸಗಿ ಸಾಲ ತೀರಿಸಲು ಹರಸಾಹಸ ಪಡಬೇಕಾಗಿದೆ. ಇಷ್ಟೆಲ್ಲಾ ರೈತರಿಗೆ ಕಷ್ಟಗಳಿದ್ದರೂ ಮತ ಪಡೆದಿರುವಂತಹ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಒಟ್ಟಾರೆಯಾಗಿ ಎಲ್ಲಾ ರಾಜಕೀಯ ವ್ಯಕ್ತಿಗಳು ಗ್ರಾಮೀಣ ಪ್ರದೇಶಗಳನ್ನು ಮರೆತಿದ್ದಾರೆ.
ನೂರಕ್ಕೆ ಇಬ್ಬರು ರೈತರ ತೋಟಗಳಲ್ಲಿ ಸಂಸದರು ಶಾಸಕರು ತರಕಾರಿ ಖರೀದಿ ಮಾಡಿ ಕೈತೊಳೆದುಕೊಂಡು ನಾವು ರೈತರ ಪರವಾಗಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರೈತರ ಕಷ್ಟಕ್ಕೆ ಜಿಲ್ಲೆಯ ಪ್ರಥಮ ಪ್ರಜೆಯಾದ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧ್ಯಂತ ನಾಶವಾಗಿರುವ ಟೊಮೆಟೊ ಬೆಳೆಯ ಅಂಕಿ ಅಂಶಗಳನ್ನು ಸಂಬಂಧಪಟ್ಟ ತೋಟಗಾರಿಕೆ, ಕೃಷಿ ಇಲಾಖೆಯಿಂದ ತರಿಸಿಕೊಂಡು ಸರ್ಕಾರದ ಗಮನಕ್ಕೆ ತಂದು ಬೆಂಬಲಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷರಾದ ವಡಗೂರು ನಾಗರಾಜ್, ಈಗಾಗಲೇ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಅದರ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರ್ತನಿಧಿಯಲ್ಲಿರುವ ಹಣದಿಂದಲಾದರೂ ರೈತರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರ ಮತ್ತು ಮಾರುಕಟ್ಟೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇನೆ ಎಂದು ಭರವಸೆ ನೀಡಿದರು.ಮನವಿ ನೀಡುವಾಗ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಮುಂತಾದ ತಾಲೂಕು ಮುಖಂಡರು ಹಾಜರಿದ್ದರು.
