ಬಂಟ್ವಾಳ: ಕೊರೊನಾ ವೈರಸ್ನಿಂದ ಬಂಟ್ವಾಳ ಕಸ್ಬಾ ಗ್ರಾಮದ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪರಿಸರವನ್ನು ಮುಂಜಾಗ್ರತೆ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದ್ದು,ಜನರು ಆತಂಕಿತರಾಗಿದ್ದಾರೆ. ಮಧ್ಯಾಹ್ನ ಬಂದ ವರದಿಯಲ್ಲಿ ಮಹಿಳೆಗೆ ಕೊರೊನಾ ಇರುವುದು ದೃಢಪಟ್ಟಿದ್ದು, ಈ ವರದಿ ಬರುವ ಮೊದಲೇ ಅಂದರೆ ಬೆಳಿಗ್ಗೆಯೇ ಕೊನೆಯುಸಿರೆಳೆದಿದ್ದಾರೆ.
ಮಹಿಳೆಯ ಸಾವಿನ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಪೇಟೆಯಿಂದ ಜಕ್ರಿಬೆಟ್ಟು ವರೆಗೆ ಸುಮಾರು 200ಮೀ.ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.ಸಾವನ್ನಪ್ಪಿರುವ ಮಹಿಳೆ ಮನೆ ಬಂಟ್ವಾಳ ಪೇಟೆಯ ಮಧ್ಯೆ ಇದ್ದು, ಅದರ ಸುತ್ತಮುತ್ತ ಸುಮಾರು ೧00ಕ್ಕೂ ಅಧಿಕ ಮನೆಗಳು, ಅಂಗಡಿ, ಮುಂಗಟ್ಟುಗಳಿವೆ. ಈ ಎಲ್ಲಾ ಪ್ರದೇಶದಲ್ಲಿ ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಅವರು ತೆರಳಿ ದ್ವನಿವರ್ಧಕದ ಮೂಲಕ ಮನೆಯಿಂದ ಯಾರೂ ಹೊರ ಬರದಂತೆ ಎಚ್ಚರಿಸಿದ್ದಾರೆ. 
ಸ್ಕ್ವಾಡ್ ಅಗಮನ :
ಸಂಜೆಯ ವೇಳೆಗೆ ಅ್ಯಂಟಿ ಕೋವಿಡ್ ಸ್ಕ್ವಾಡ್ ತಂಡ ಅಗಮಿಸಿ ಬಂಟ್ವಾಳ ಪೇಟೆಯಾದ್ಯಂತ ತಪಾಸಣೆ ನಡೆಸಿದ್ದು,ತೀವ್ರ ನಿಗಾ ಇರಿಸಿದೆ.ಮೃತ ಮಹಿಳೆ ಮತ್ತು ಕುಟುಂಬ ಓಡಾಡಿರುವ ಸ್ಥಳದ ಟ್ರ್ಯಾಕ್ ಕಾರ್ಯದಲ್ಲಿ ತೊಡಗಿದೆ.
ಪತಿ,ಮಕ್ಕಳು ಕ್ವಾರೆಂಟೇನ್ ನಲ್ಲಿ:
ಮೃತ ಮಹಿಳೆಯ ಪತಿ ಮತ್ತು ಇಬ್ಬರು ಮಕ್ಕಳು ಹಾಗೂ ಸಂಬಂಧಿಕರನ್ನು ಕ್ವಾರಂಟೇನ್ ನಲ್ಲಿರಿಸಲಾಗಿದೆ.ಆಕೆಯ ಅತ್ತೆ ತಿಂಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡು ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರ ಪಕ್ಕದ ಮನೆಯ ಮಹಿಳೆಯೊಬ್ಬರು ಕೂಡ ಮೂರುದಿನಗಳಿಂದ ಜ್ಬರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಮನೆಯ ಸುತ್ತಮುತ್ತಲಿನ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ. ಸೋಂಕಿತ ಮಹಿಳೆ ಇದ್ದ ಮನೆಯ ಸುತ್ತಮುತ್ತಲಿನ ಮನೆಗಳವರ ಆರೋಗ್ಯ ತಪಾಸಣೆ ಸಹಿತ ಹಲವು ಕ್ರಮಗಳನ್ನು ಜಿಲ್ಲಾಡಳಿತವು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ಸಹಕಾರದಲ್ಲಿ ಕೈಗೊಳ್ಳಲಿದೆ.
ವೈದ್ಯರು ಕ್ವಾರಂಟೇನ್ ಗೆ:
ಮೃತ ಮಹಿಳೆಯನ್ನು ಐದು ದಿನಗಳ ಹಿಂದೆ ತಪಾಸಣೆ ನಡೆಸಿದ ಬಂಟ್ವಾಳದ ವೈದ್ಯರೊಬ್ಬರನ್ನು ಭಾನುವಾರ ಸಂಜೆ ಕ್ವಾರಂಟೇನ್ ಗೆ ದಾಖಲಿಸಲಾಗಿದೆ. ಬಂಟ್ವಾಳದಲ್ಲಿ ಎಲ್ಲ ಖಾಸಗಿ ಆಸ್ಪತ್ರೆ ಮುಚ್ಚಿದ್ದರೂ,ಈ ವೈದ್ಯರು ಮಾತ್ರ ಕ್ಲಿನಿಕ್ ಮತ್ತು ಮನೆಯಲ್ಲು ಸೇವೆ ನೀಡುತ್ತಿದ್ದರು.ಇದೀಗ ಅವರು ನೀಡಿರುವ ಸೇವೆಯಿಂದ ಕ್ವಾರೆಂಟೆನ್ ನಲ್ಲಿರುವಂತಾಗಿದೆ.ಈ ವೈದ್ಯರು ಲಾಕ್ ಡೌನ್ ಆರಂಭವಾದಾಗಲೇ ಪ್ರಧಾನಿ ಮೋದಿಯವರ ನೀಡಿರುವ ಕರೆಯನ್ನು ಪಾಲಿಸಿ,ಎಚ್ಚರಿಕೆಯಿಂದ ಇರುವಂತೆ ತಮ್ಮ ಮನೆ ಮುಂದೆ ಬ್ಯಾನರ್ ಕೂಡ ಅಳವಡಿಸಿ ಎಲ್ಲ ವೈದ್ಯರಿಗೆ ಮಾದರಿಯಾಗಿದ್ದರು.
