ಕೈಕಂಬ : ಲಾಕ್‍ಡೌನ್ ಹಿನ್ನೆಲೆಯಲ್ಲಿ ಶನಿವಾರ ಸಂಪೂರ್ಣ ಬಂದ್ ಆಚರಿಸಲ್ಪಟ್ಟದ್ದರಿಂದ ಜಿಲ್ಲೆಯ ಜನತೆಗೆ ಪ್ರಸಕ್ತ ಪರಿಸ್ಥಿತಿಯ ಪೂರ್ಣ ಬಿಸಿ ತಟ್ಟಿದೆ. ಬೆಳಿಗ್ಗೆ ಆರು ಗಂಟೆಗೆ ಹಾಲು ಮತ್ತು ಪೇಪರ್ ಮಾರಾಟ ಅಂಗಡಿಗಳ ಹೊರತುಪಡಿಸಿ, ನಿನ್ನೆಯವರೆಗೆ ನಿರ್ಬಂಧಿತ ಅವಧಿಯಲ್ಲೂ ಕದ್ದುಮುಚ್ಚಿ ತೆರೆದಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಪರಿಣಾಮ ಗುರುಪುರ, ವಾಮಂಜೂರು, ಕೈಕಂಬ, ಗಂಜಿಮಠ, ಎಡಪದವು, ಕುಪ್ಪೆಪದವಿನಂತಹ ಪೇಟೆಗಳಲ್ಲಿ ರಸ್ತೆಗಿಳಿದ ಸಾರ್ವಜನಿಕರು ಅಗತ್ಯ ವಸ್ತುಗಳಿಲ್ಲದೆ ಬರಿಗೈಯಲ್ಲಿ ಮನೆ ಸೇರುವಂತಾಯಿತು.
ಪೆಟ್ರೋಲ್ ಪಂಪ್ ಬಂದ್ :
ನಿನ್ನೆಯವರೆಗೆ ಪೆಟ್ರೋಲ್ ಪಂಪುಗಳು ತೆರೆದಿದ್ದರಿಂದ ರಸ್ತೆಗಳಿಗೆ ಬಿಡುವೆಂಬುದಿರಲಿಲ್ಲ. ಟೀಕೆಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶನಿವಾರ ಪೆಟ್ರೋಲ್ ಬಂದ್ ಮಾಡಿದೆ. ಇದರಿಂದ ಜಾಲಿ ರೈಡರುಗಳು ಹಾಗೂ ಅನವಶ್ಯಕ ತಿರುಗಾಡುತ್ತಿದ್ದ ಜನರಿಗೆ ಬ್ರೇಕ್ ಬಿದ್ದಂತಾಗಿದೆ. ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಬಾಗಿಲು ಮುಚ್ಚಲಾಗಿದ್ದು, ಭಕ್ತರ ಆಗಮನಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಹಳ್ಳಿಗಳಲ್ಲಿ ಹೆಚ್ಚಿದ ಭೀತಿ ! ನಗರ ಮತ್ತು ಪೇಟೆ ಪ್ರದೇಶಕ್ಕಿಂತ ಹೆಚ್ಚಾಗಿ ಹಳ್ಳಿ ಪ್ರದೇಶಗಳ ಜನರಲ್ಲಿ ಕರೋನಾ ಭೀತಿ ಹೆಚ್ಚಾಗಿದ್ದು, ಜನರೀಗ ಮನೆಯಿಂದ ಹೊರಬರಲು ಭೀತಿಪಡುವಂತಾಗಿದೆ.
ಆದರೆ ನಗರ ಪ್ರದೇಶಗಳಲ್ಲಿ ಕರೋನಾ ಸಾಂಕ್ರಾಮಿಕ ವೈರಸ್ ಹರಡುವ ಮಂದಿ ತಿರುಗಾಡುತ್ತಲೇ ಹಳ್ಳಿಗರಿಗೆ ಭಯ ಹುಟ್ಟಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಸರ್ಕಾರ ಆವಶ್ಯಕ ಸೇವೆಗಳು ಲಭ್ಯವಿದ್ದರೂ, ಇದುವರೆಗೆ ಹಳ್ಳಿಗಳಿಗೆ ಸರ್ಕಾರಿ ಸೇವೆ ತಲುಪಿಲ್ಲ. ಕೆಲವೆಡೆ ಹಾಲಿಲ್ಲ, ಇನ್ನು ಕೆಲವೆಡ ಮೆಡಿಕಲ್ ಅಂಗಡಿಗಳು ಮುಚ್ಚಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ. ನಗರ ಪ್ರದೇಶಗಳಲ್ಲಿ ಪಡಿತರ ಲಭ್ಯವಿದ್ದರೆ, ಹಳ್ಳಿಗಳಲ್ಲಿ ಇನ್ನೂ ಪಡಿತರ ಲಭ್ಯವಿಲ್ಲ. ಸರ್ಕಾರ ಈ ದೆಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕೆಂಬುದು ಸಾರ್ವಜನಿಕ ಕಳಕಳಿಯಾಗಿದೆ.
