ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಕ್ಕೇರಿ ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ರಾತೋರಾತ್ರಿ ದುರಸ್ಥಿ ಮಾಡುತ್ತಿರುವುದನ್ನು ಗಮನಿಸಿ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಅಧಿಕಾರಿಗಳು ಮನೆಯನ್ನೇ ನೆಲಸಮ ಮಾಡಿದ ಪ್ರಸಂಗವೊಂದು ಶುಕ್ರವಾರ ಕುಪ್ಪೆಪದವಿನಲ್ಲಿ ನಡೆದಿದೆ.
ಕುಪ್ಪೆಪದವು ಕಾಡಕ್ಕೇರಿ ಎಂಬಲ್ಲಿರುವ ಮರೈನ್ ಕಾಲೇಜಿನ ಪಕ್ಕದಲ್ಲಿ ಸುಮಾರು 2.30 ಎಕ್ರೆ ಸರಕಾರಿ ಜಾಗವಿದ್ದು ಈ ಜಾಗವನ್ನು ಗ್ರಾಮಕರಣೀಕರ ಕಚೇರಿ ಸಹಿತ ಇತರ ಸರಕಾರಿ ಕಚೇರಿ ಗಳಿಗಾಗಿ ಮೀಸಲಿರಿಸಲಾಗಿತ್ತು.ಈ ಜಾಗದಲ್ಲಿ ಹಳೆಯ ಮನೆಯೊಂದಿದ್ದು ಗುರುವಾರ ರಾತ್ರಿ ಕೆಲವು ಕಾರ್ಮಿಕರು ಮನೆ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದನ್ನು ಕಂಡ ಸಾರ್ವಜನಿಕರು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರು, ರಾತ್ರಿಯೇ ಸ್ಥಳಕ್ಕೆ ಬಂದಿದ್ದ ಗ್ರಾಮಕರಣಿಕರು ಮತ್ತು ಪೊಲೀಸರು ಕೆಲಸಗಾರರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಶುಕ್ರವಾರ ಮತ್ತೆ ಕಾರ್ಮಿಕರು ಮನೆ ದುರಸ್ತಿಯಲ್ಲಿ ತೊಡಗಿದ್ದು ಕಂದಾಯ ಅಧಿಕಾರಿಗಳು ಪೊಲೀಸರ ರಕ್ಷಣೆಯಲ್ಲಿ ಮನೆಯನ್ನು ನೆಲಸಮ ಮಾಡಿದ್ದಾರೆ. 

ಪಂಚಾಯತ್ ಸದಸ್ಯರ ವಿರುದ್ಧ ಆರೋಪ:
ಪಂಚಾಯತ್ ನ ಹಿರಿಯ ಸದಸ್ಯರೊಬ್ಬರು ಮತ್ತು ಕೆಲವು ವ್ಯಕ್ತಿಗಳು ಸೇರಿ ಮಹಿಳೆಯೊಬ್ಬರಿಯಿಂದ ಹಣ ಪಡೆದು ಮನೆಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ದುರಸ್ತಿಯಲ್ಲಿ ತೊಡಗಿದ್ದ ಕೆಲಸಗಾರರು ತಮಗೆ ಕೆಲಸ ಮಾಡಲು ಹಿರಿಯ ಪಂಚಾಯತ್ ಸದಸ್ಯರೇ ಹೇಳಿದ್ದು ಎಂದು ತಿಳಿಸಿದ್ದಾರೆ, ಅಲ್ಲದೆ ಪಂಚಾಯತ್ ಗೆ ತಿಳಿಸದೇ ಅಕ್ರಮವಾಗಿ ನೀರಿನ ಸಂಪರ್ಕವನ್ನೂ ನೀಡಲಾಗಿದೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಈಬಗ್ಗೆ ತನಿಕೆ ನಡೆಸುವಂತೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

