ಬಂಟ್ವಾಳ : ಕಾಡು ಹಂದಿಯೊಂದು ಬಾವಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲದಲ್ಲಿ ರವಿವಾರ ಸಂಭವಿಸಿದ್ದು ಕಾಡು ಹಂದಿಯನ್ನು ರಕ್ಷಿಸಲಾಗಿದೆ.ಇಲ್ಲಿನ ನಿವಾಸಿ ಉಸ್ಮಾನ್ ಅವರ ಮನೆಯ ಅಂಗಳದ ಬಾವಿಗೆ ಹೆಣ್ಣು ಕಾಡು ಹಂದಿ ಬಿದ್ದಿದ್ದು, ಅರಣ್ಯ ಇಲಾಖೆ ಮೇಲೆತ್ತಿದ್ದಾರೆ. ರಾತ್ರಿ ಕಾಡು ಹಂದಿ ನೀರನ್ನರಸಿ ಬರುವಾಗ ಆವರಣವಿಲ್ಲದ ಈ ಬಾವಿಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಮನೆ ಮಂದಿಗೆ ಕಾಡು ಹಂದಿಯ ಆಕ್ರಂದನ ಕೇಳಿ ಬಂದು ಈ ಘಟನೆ ಬೆಳಕಿಗೆ ಬಂದಿತ್ತು.
ಬಾವಿಯೊಳಗೆ ಬಿದ್ದ ಕಾಡು ಹಂದಿ ಮತ್ತೆ ಮೇಲೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಬಳಿಕ ಮನೆಯವರು ಬಂಟ್ವಾಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂಟ್ವಾಳ ಉಪವಲಯ ಪ್ರಭಾರ ಸಂರಕ್ಷಣಾ„ಕಾರಿ ಶ್ರೀಧರ್ ಅವರು ಸಿಬಂದಿ ಸಹಿತ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಹಾಯದಿಂದ ಕಾಡುಕೋಣವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದ್ದರು.ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸತೊಡಗಿದಾಗ ಹೆದರಿದ ಕಾಡು ಹಂದಿ ದುರುಗುಟ್ಟಲಾರಂಭಿಸಿತ್ತು. ಮಧ್ಯಾಹ್ನ ಬಳಿಕ ಸ್ಥಳೀಯ ಇದಿನಬ್ಬ ಅವರು ಹಂದಿಯ ಸೊಂಟಕ್ಕೆ ಹಗ್ಗದ ಉರುಳು ಹಾಕಿ ಹಂದಿಯನ್ನು ಮೇಲೆತ್ತಿ ಬೋನಿಗೆ ಸೇರಿಸಲಾಯಿತು. ಬಳಿಕ ಕಾಡು ಹಂದಿಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಯಿತು.
