ಕೆಜಿಎಫ್:ಡಿ. 1ರ ಭಾನುವಾರದಂದು ನಡೆಯುವ ಸಶಸ್ತ್ರ ಪೊಲೀಸ್ ಸಿ.ಇ.ಟಿ. ಪರೀಕ್ಷೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಯುತ ಪರೀಕ್ಷೆಯನ್ನು ನಡೆಸಲು ಕೆಜಿಎಫ್ ಪೊಲೀಸ್ ಜಿಲ್ಲೆಯು ಸರ್ವ ಸಿದ್ದವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದರು.ಅವರು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ, ಪರೀಕ್ಷಾ ಅಧಿಕಾರಿ, ಸಿಬ್ಬಂದಿಗಳ ಪೂರ್ವ ಸಿದ್ದತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಶಸ್ತ್ರ ಪೊಲೀಸ್ ಕಾನ್ಸ್‍ಟೆಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿಕೊಂಡಿರುವ 4100 ಮಂದಿ ಅಭ್ಯರ್ಥಿಗಳಿಗೆ ಪೊಲೀಸ್ ಸಿ.ಇ.ಟಿ. ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 1ರ ಭಾನುವಾರ ಬೆಳಿಗ್ಗೆ 11 ರಿಂದ 12.30ರ ವರೆಗೆ ಚಾಂಫೀಯನ್‍ರೀಫ್ಸ್‍ನಲ್ಲಿನ ಡಾ|| ಟಿ.ತಿಮ್ಮಯ್ಯ ಇಂಜೀನಿಯರಿಂಗ್ ಕಾಲೇಜ್, ರಾಬರ್ಟ್‍ಸನ್‍ಪೇಟೆಯಲ್ಲಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್ ಮತ್ತು ಉರಿಗಾಂನಲ್ಲಿನ ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಕಕಾಲದಲ್ಲಿ ನಡೆಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ವಿವರಿಸಿದರು.
ಪರೀಕ್ಷೆಯನ್ನು ಮುಕ್ತವಾಗಿ, ಶಾಂತಿಯುತವಾಗಿ, ನಿಸ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಬಂದೋಬಸ್ತಿಗಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗಳು ನಿರ್ಭಯದಿಂದ ಪರೀಕ್ಷಾ ಕರ್ತವ್ಯ ನಿರ್ವಹಿಸಬಹುದು ಹಾಗೂ ಅಭ್ಯರ್ಥಿಗಳು ನಿರ್ಭಿತಿಯಿಂದ ಪರೀಕ್ಷೆಯನ್ನು ಬರೆಯಬಹುದೆಂದು ಎಸ್‍ಪಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕರೆ ನೀಡಿದರು. ಸಭೆಯಲ್ಲಿ ಜೈನ್ ಕಾಲೇಜಿನ ಪ್ರಾಂಶುಪಾಲೆ ಡಾ|| ರೇಖಾ ಸೇಥಿ, ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ನಾಗರಾಜ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೇಶವಮೂರ್ತಿ, ಡಿವೈಎಸ್‍ಪಿ ಬಿ.ಎಲ್. ಶ್ರೀನಿವಾಸಮೂರ್ತಿ, ಶಿಕ್ಷಣಾಧಿಕಾರಿ ಎಫ್.ಎಂ. ಅಶ್ವಥ್ ಉಪಸ್ಥಿತರಿದ್ದರು.
ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ವೆಂಕಟರವಣಪ್ಪ, ಮುಸ್ತಾಕ್‍ಪಾಷ, ಸೂರ್ಯಪ್ರಕಾಶ್, ನಿಸ್ತಂತು ಪಿಐ ಎನ್. ಉಮಾಶಂಕರ್, ಆರ್‍ಪಿಐ ಟಿ.ಮಂಜುನಾಥ ಸೇರಿದಂತೆ ಜಿಲ್ಲೆಯ ಪಿಎಸ್‍ಐಗಳು ಹಾಜರಿದ್ದರು.
