ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಅ.2ರಂದು ಮೂಡುಬಿದರೆಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್ನ ಅಧ್ಯಕ್ಷ ಯುವರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್, ತಹಹಶೀಲ್ದಾರ್ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುರಸಭೆ ಮತ್ತು ಆರಕ್ಷಕ ಠಾಣೆ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೂಡುಬಿದರೆಯನ್ನು ಸ್ವಚ್ಛ ನಗರವನ್ನಾಗಿಸುವ ಉದ್ದೇಶದಿಂದ ಈ ಆಂದೋಲನವನ್ನು ಕೈಗೊಂಡಿದ್ದು ಪ್ರೌಢಶಾಲೆ ಮತ್ತು ಕಾಲೇಜಿನ ಸುಮಾರು 700 ವಿದ್ಯಾರ್ಥಿಗಳು, 30 ಮಾಜಿ ಸೈನಿಕರು ಮತ್ತು ವಿವಿಧ ಸಂಘಗಳ ಸದಸ್ಯರುಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಮಹಾವೀರ ಕಾಲೇಜು, ಜೈನ್ ಹೈಸ್ಕೂಲ್, ಅಲಂಗಾರು ಸೈಂಟ್ ಥೋಮಸ್, ರೋಟರಿ ಆಂಗ್ಲ ಮಾಧ್ಯಮ, ಬಾಬು ರಾಜೇಂದ್ರ ಪ್ರೌಢಶಾಲೆ, ಆಳ್ವಾಸ್ ಕಾಲೇಜು, ಹೋಲಿ ರೋಸರಿ. ಪ್ರಾಂತ್ಯ ಹೈಸ್ಕೂಲ್, ಮಹಮ್ಮದೀಯ ಆಂಗ್ಲ ಮಾಧ್ಯಮ ಮತ್ತು ಜೈನ್ ಕಾಲೇಜಿನಲ್ಲಿ ಬೆಳಿಗ್ಗೆ ಏಕಕಾಲದಲ್ಲಿ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ದೊರೆಯಲಿದೆ.
ನಂತರ 11 ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ 10 ಜನ ಪೌರ ಕಾರ್ಮಿಕರಿಗೆ ಸನ್ಮಾನ ನಡೆಯಲಿದ್ದು, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಕ್ಲಬ್ನ ಕಾರ್ಯದರ್ಶಿ ಚಂದ್ರಹಾಸ ದೇವಾಡಿಗ, ಉಮೇಶ್ ರಾವ್, ವಿನ್ಸೆಂಟ್ ಡಿ’ಕೋಸ್ತಾ, ಎಂ,ಕೆ,ಹರೀಶ್ಮತ್ತು ವಸಂತ ಪೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
