ಬಂಟ್ವಾಳ ಬಂಟ್ವಾಳ ತಾಲ್ಲೂಕಿನ ಪುಂಚೋಡಿ-ಕರಿಮಲೆ ರಸ್ತೆ ನಡುವಿನ ಅಮ್ಯಾಲು ಗುಡ್ಡೆ ಅರಣ್ಯ ಪ್ರದೇಶದಿಂದ ಹೊರ ಬಂದು ಸ್ಥಳೀಯ ನಿವಾಸಿಗಳಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ರಾಯಿ ಸಮೀಪದ ಕೊಯಿಲ ಗ್ರಾಮದ ಅಮ್ಯಾಲು ಗುಡ್ಡೆಯಿಂದ ಬದನಡಿ, ಪಂಜಿಕಲ್ಲು ಗ್ರಾಮದ ಪುಂಚೋಡಿ, ಚೆನ್ನೈತ್ತೋಡಿ ಗ್ರಾಮದ ಕೊಪ್ಪಲ ಮತ್ತಿತರ ಪ್ರದೇಶಗಳಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಂಡು ಇಲ್ಲಿನ ದನ ಕರುಗಳು ಮತ್ತು ಸಾಕಷ್ಟು ನಾಯಿಗಳನ್ನು ಹಿಡಿದು ಸ್ವಾಹ ಮಾಡಿತ್ತು. ಇಲ್ಲಿನ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಹಲವು ಬಾರಿ ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿತ್ತು. ಇಲ್ಲಿನ ಅರಣ್ಯ ಪ್ರದೇಶದಲ್ಲಿ ನೆಟ್ಟಿರುವ ಗಿಡ- ಮರಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಮರಿಗಳನ್ನು ತಂದು ಬಿಟ್ಟಿದ್ದಾರೆ ಎಂಬ ವದಂತಿಯೂ ವ್ಯಾಪಕವಾಗಿ ಹರಡಿತ್ತು. ಇದರಿಂದಾಗಿ ಸ್ಥಳೀಯರು ಹುಲಿ ಮತ್ತು ಚಿರತೆ ಕಾಟದ ಬಗ್ಗೆ ಅರಣ್ಯ ಇಲಾಖೆಗೆ ದೂರಿಕೊಂಡ ಹಿನ್ನೆಲೆಯಲ್ಲಿ ಬೋನಿಗೆ ನಾಯಿ ಮರಿಯೊಂದನ್ನು ಕಟ್ಟಿ ಕಳೆದ ವರ್ಷ ಒಂದು ಚಿರತೆ ಹಿಡಿಯಲಾಗಿದ್ದು, ಭಾನುವಾರ ರಾತ್ರಿಯೂ ಇದೇ ತಂತ್ರ ಉಪಯೋಗಿಸಿ ಸ್ಥಳೀಯರೇ ಚಿರತೆಯನ್ನು ಬೋನಿಗೆ ಬೀಳುವಂತೆ ಮಾಡಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ವೇಣೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪುಂಜಾಲಕಟ್ಟೆ ಪೊಲೀಸರು ಧಾವಿಸಿ ಚಿರತೆಯನ್ನು ಬೋನಿನ ಸಹಿತ ಕುದುರೆಮುಖ ರಕ್ಷಿತಾರಣ್ಯಕ್ಕೆ ಬಿಡಲು ಸಾಗಿಸಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬೋನಿಗೆ ಚಿರತೆಯೊಮದು ಬಿದ್ದಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ಅಪಾರ ಮಂದಿ ಧಾವಿಸಿ ಕುತೂಹಲದಿಂದ ವೀಕ್ಷಿಸಿದರು.
