ಸುದ್ದಿ9ಕೈಕಂಬ: ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಸಾಗರದಾಟಿ ಹೋಗಿದ್ದು ಅಕ್ಟೋಬರ್ 17ರಿಂದ ಈ ಭಾಷೆ ಕುವೈಟ್ ನಲ್ಲೂ ಮಾರ್ದನಿಸಲಿದೆ.
ದಕ್ಷಿಣ ಕನ್ನಡದ ಕೆಲವು ಉತ್ಸಾಹಿ ತರುಣರು ಕುವೈಟ್ ದೇಶದಲ್ಲಿ `ತುಳುಕೂಟ ಕುವೈಟ್’ ಎಂಬ ಹೆಸರಿನ ಹೊಸ ತುಳುನಾಡು ಸೃಷ್ಟಿಸಿದ್ದು ತುಳುಕೂಟದ ಅಂಗವಾಗಿ `ಬಂಗಾರ್ ಬಾಬು’ ಎನ್ನುವ ತುಳುನಾಟಕವೂ ಅಮೇರಿಕನ್ ಇಂಟರ್ ನ್ಯಾಷನಲ್ ಸ್ಕೂಲ್- ಮೈದಾನ್ ಹವಾಲಿ ಇಲ್ಲಿ ಬಿತ್ತರಗೊಳ್ಳಲಿದೆ.

ತುಳುನಾಡಿನ ಉತ್ಸಾಹಿ ಯುವಕರು ಈ ನಾಟಕದಲ್ಲಿ ಪಾಲ್ಗೊಳ್ಳಲಿದ್ದು, ಬಲೇ ತೆಲಿಪಾಲೆ ಖ್ಯಾತಿಯ ಕಲಾವಿದರೂ ಇದರಲ್ಲಿ ಅಭಿನಯಿಸಿರುವುದು ವಿಶೇಷ.
ಅರುಣ್ ಚಂದ್ರ ಬಿ.ಸಿ.ರೋಡ್ ಸಾರಥ್ಯದಲ್ಲಿ ಪ್ರಖ್ಯಾತ ನಾಟಕ ಕಲಾವಿದ ನೆಲ್ಲು ಪೆರ್ಮನ್ನೂರು ನಟಿಸಲಿದ್ದಾರೆ. ಈ ನಾಟಕಕ್ಕೆ ವಿಶ್ವನಾಥ್ ನೆಲ್ಯಾಡಿ ಸಂಗೀತ ನಿರ್ದೇಶಿಸಿದ್ದಾರೆ.
ಸತೀಶ್ ಆಚಾರ್ಯ, ಅರುಣ್ ಚಂದ್ರ, ವಿಶ್ವನಾಥ್ ಮುಂತಾದವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ವಿಶೇಷ ರೀತಿಯಲ್ಲಿ ಸಂಯೋಜಿಸಲಿರುವ ಈ ನಾಟಕ ಸಾಗರದಾಚೆಗಿನ ತುಳುವರನ್ನು ಖುಷಿಪಡಿಸಲಿದೆ
