ಬಂಟ್ವಾಳ:ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಆತ್ಮಸ್ಥೈರ್ಯ ಮತ್ತು ಸಾಧನಾಶೀಲರಾಗಿ ಬೆಳೆಯಲು ಪ್ರೇರಣೆ ಸಿಗುತ್ತದೆ. ಜೀವನದಲ್ಲಿ ಸಂಸ್ಕಾರದ ಜೊತೆಗೆ ಸಚ್ಚಾರಿತ್ರ್ಯ ಮತ್ತು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡು ಮುನ್ನಡೆಸಲು ಎನ್ ಎಸ್ ಎಸ್ ವಿಶೇಷ ಶಿಬಿರ ಸಹಕಾರಿಯಾಗುತ್ತದೆ ಎಂದು ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.
ಇಲ್ಲಿನ ಕಕ್ಯಪದವು ಎಲ್ಸಿಆರ್ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಪಿಲಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರಗಳ ತನಕ ನಡೆಯುವ ವಾರ್ಷಿಕ ವಿಶೇಷ ಶಿಬಿರಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಕಕ್ಯಪದವು ಎಲ್ಸಿಆರ್ ಶಿಕ್ಷಣ ಸಂಸ್ಥೆ ಸಂಚಾಲಕ ರೋಹಿನಾಥ ಪಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಅವರಲ್ಲಿ ಸಾಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಹರಿಪ್ರಸಾದ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೀಳರಿಮೆ ದೂರಗೊಳಿಸಿ ಸೃಜನಶೀಲತೆ ಮತ್ತು ಸಾಧನೆಗೆ ಶಿಬಿರ ಹೊಸ ಚೈತನ್ಯ ನೀಡುತ್ತದೆ ಎಂದರು. ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರವೀಣ ಎ., ಉದ್ಯಮಿ ಪುರುಷೋತ್ತಮ ಶೆಟ್ಟಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಶುಭ ಹಾರೈಸಿದರು. ವ್ಯವಸಾಯ ಸೇವಾ ಸಹಕಾರಿ ಸಂಗದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಉದ್ಯಮಿ ವಿಜಯ ರೈ ಆಲದಪದವು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಫೆರ್ನಾಂಡಿಸ್, ಮುಖ್ಯಶಿಕ್ಷಕಿ ಪ್ರಭಾವತಿ ಭಟ್, ಶಿಬಿರ ನಾಯಕ ಧನ್ರಾಜ್, ಶಿಬಿರ ನಾಯಕಿ ಅನ್ವಿತಾ ಬಿ. ಮತ್ತಿತರರು ಇದ್ದರು.
ಯೋಜನಾಧಿಕಾರಿ ಶಿವರಾಜ್ ಗಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ದೀಕ್ಷಿತಾ ಎ.ವಂದಿಸಿದರು. ಸಹ ಯೋಜನಾಧಿಕಾರಿ ವಿಂದ್ಯಾಶ್ರೀ ನಿರೂಪಿಸಿದರು.
