ಬಂಟ್ವಾಳ : ಮನೆಯ ಯಜಮಾನನ ಸಾವಿನಿಂದ ನೊಂದು ಶನಿವಾರ ರಾತ್ರಿ ಮೈಸೂರಿನ ಕುಟಂಬವೊಂದು ನೇತ್ರಾವತಿ ನದಿಗೆ ಹಾರಿದ್ದು, ಈ ಪೈಕಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗ ಕೌಶಿಕ್ ಮಂದಣ್ಣ ಅವರ ಮೃತದೇಹ ಸೋಮವಾರವೂ ಪತ್ತೆಯಾಗಿಲ್ಲ. ಸೋಮವಾರ ಬೆಳಿಗ್ಗಿನಿಂದ ಸಂಜೆಯವೆರಗೆ ಶೋಧ ನಡೆಸಿದ ಅಗ್ನಿಶಾಮಕ ದಳ, ಪೊಲೀಸ್, ಸ್ಥಳೀಯ ಮುಳುಗುತಜ್ಞರ ತಂಡ ಬರೀಗೈಲಿ ಹಿಂದಿರುಗಿದೆ.
ಮನೆಯ ಯಜಮಾನನ ಸಾವಿನಿಂದ ಅಘಾತಗೊಂಡಿದ್ದ ಕೊಡಗು ಜಿಲ್ಲೆಯ ವೀರಾಜೆಪೇಟೆಯ ತಾಲೂಕಿನ ಕಡಂಗ ನಿವಾಸಿ, ಸದ್ಯ ಮೈಸೂರಿನ ಪಿ.ಎಸ್. ನಗರದ ಕವಿತಾ ಮಂದಣ್ಣ ಅವರು ಪುತ್ರಿ ಕಲ್ಪಿತಾ ಮಂದಣ್ಣ, ಕೌಶಿಕ್ ಮಂದಣ್ಣ ತಮ್ಮಿಬ್ಬರು ಮಕ್ಕಳು ಹಾಗೂ ತಮ್ಮ ಸಾಕು ನಾಯಿನೊಂದಿಗೆ ಶನಿವಾರ ರಾತ್ರಿ ೧೦.೩೦ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ೭೫ರ ಬಿ.ಸಿ.ರೋಡಿನ ನೇತ್ರಾವತಿ ನದಿಗೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿತ್ತು. ಈ ವೇಳೆ ತಾಯಿ ಕವಿತಾ ಅವರ ಮೃತದೇಹವು ಅಂದೇ ರಾತ್ರಿ ಪತ್ತೆಯಾದರೆ, ರವಿವಾರ ಮಧ್ಯಾಹ್ನದ ಹೊತ್ತಿಗೆ ಪುತ್ರಿ ಕಲ್ಪತಾ ಮಂದಣ್ಣ ಅವರ ಮೃತದೇಹವು ಕೋಣಾಜೆಯ ಇನೋಳಿಯಲ್ಲಿ ಪತ್ತೆಯಾಗಿತ್ತು. ಆದರೆ, ರವಿವಾರ ರಾತ್ರಿಯವೆರಗೂ ಕೌಶಿಕ್ ಅವರ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು.

ಪತ್ತೆಯಾಗದ: ಕೌಶಿಕ್
ಬಂಟ್ವಾಳ ಹಾಗೂ ಪಾಂಡೇಶ್ವರದ ಅಗ್ನಿಶಾಮಕ ದಳವು ಪಾಣೆಮಂಗಳೂರು ಹಳೇ ಸೇತುವೆಯಿಂದ ತುಂಬೆ ವೆಂಟೆಡ್ ಡ್ಯಾಂವರೆಗೆ ರವಿವಾರ ರಾತ್ರಿಯವರೆಗೆ ಕಾರ್ಯಾಚರಣೆ ಮಾಡಿತ್ತು. ಆದರೂ ಕೌಶಿಕ್ ಮಂದಣ್ಣ ಅವರ ಮೃತದೇಹ ಪತ್ತೆಯಾಗಿಲ್ಲ. ಇದರಿಂದ ಸೋಮವಾರ ಬೆಳಿಗ್ಗೆ ಪಾಂಡೇಶ್ವರದ ಎರಡು ದೋಣಿಗಳಲ್ಲಿ ಅಗ್ನಿಶಾಮಕದಳ ೧೨ ಮಂದಿಯ ತಂಡ, ಎನ್ಡಿಆರ್ಎಫ್ನ ೧೫ ಮಂದಿಯ ತಂಡ, ಸ್ಥಳೀಯ ಈಜುಗಾರರ ತಂಡ ಶೋಧಾ ಕಾರ್ಯಾಚರಣೆ ಮುಂದುವರಿಸಿದೆ. ಇದರಲ್ಲಿ ಎನ್ಡಿಆರ್ಎಫ್ನ ತಂಡ ತುಂಬೆ ಡ್ಯಾಂನ ಹೊರಭಾಗದಲ್ಲಿ ಅಂದರೆ ಮಂಗಳೂರು ಭಾಗದಲ್ಲಿ ಕಾರ್ಯಾಚರಣೆ ನಡೆಸಿದರೆ, ಪಾಂಡೇಶ್ವರದ ಅಗ್ನಿಶಾಮಕ ತಂಡವು ಇನೋಳಿ ವ್ಯಾಪ್ತಿಯಲ್ಲಿ ರಾತ್ರಿಯವರೆಗೂ ಶೋಧ ನಡೆಸಿದೆ.
ಮಂಗಳೂರಿನಲ್ಲಿ ಅಂತ್ಯಸಂಸ್ಕಾರ:
ಕವಿತಾ ಮಂದಣ್ಣ ಅವರ ಸಹೋದರ ಸೋಮಣ್ಣ ಅವರು ಇವರಿಬ್ಬರ ಮೃತದೇಹವನ್ನು ಗುರುತು ಪತ್ತೆ ಮಾಡಿದರು. ಬಳಿಕ ಸೋದರ ಸೋಮಣ್ಣ ಅವರ ಮಾಹಿತಿಯನ್ವಯ ಮೃತದೇಹವನ್ನು ಕವಿತಾ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ತಾಯಿ, ಮಗಳ ಮೃತದೇಹವನ್ನು ಮೈಸೂರಿಗೆ ಕೊಂಡೋಗದೇ, ಕುಟುಂಸ್ಥರ ಅನುಮತಿ ಮೆರೆಗೆ ತೊಕ್ಕೊಟ್ಟು ವಿನಲ್ಲಿ ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ.
