ವಾಮಂಜೂರು: ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನಿನಲ್ಲಿ ಭಾನುವಾರ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಕರ್ನಾಟಕದ ಸರ್ಕಾರದ ಮೀನುಗಾರಿಕಾ ಇಲಾಖೆ ಜಂಟಿ ಆಶ್ರಯದಲ್ಲಿ `”ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ’ ಜರುಗಿತು.
ಪಿಲಿಕುಳ ಸರೋವರದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಹಾಗೂ ಸರೋವರಕ್ಕೆ ಸಾವಿರಾರು ಮರಿ ಮೀನುಗಳ ಬಿಡುಗಡೆಗೊಳಿಸಿ ಮತ್ಸ್ಯೋತ್ಸವ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡುತ್ತ, ಮೀನು ಹಿಡಿಯುವುದು ಕರಾವಳಿ ಜನರ ವೃತ್ತಿಯಾಗಿದೆ ಮತ್ತು ಇಲ್ಲಿನ ಜನರ ಆಹಾರ ಪದ್ಧತಿಯಲ್ಲಿ ಮೀನಿಗೆ ಮಹತ್ವವಿದೆ. ಇಲ್ಲಿನ ಸರೋವರದ ಮೀನುಗಳಿಗೆ ಉತ್ತಮ ಆಹಾರ ನೀಡಿ ಸಾಕಿ, ವರ್ಷಕ್ಕೊಂದು ಬಾರಿ ಮತ್ಸ್ಯೋತ್ಸವ, ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಆಯೋಜಿಸಿ ಮೀನುಗಾರಿಕೆ ಉತ್ತೇಜಿಸಲಾಗುತ್ತದೆ ಎಂದರು.
ದಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮೀನುಗಾರಿಕಾ ಮಹಾವಿದ್ಯಾಲಯ(ಮಂಗಳೂರು), ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮುದ್ರಿಸಿದ `ಜವಾಬ್ದಾರಿಯುತ ಮೀನುಗಾರಿಕೆ’ ಕೈಪಿಡಿ ಬಿಡುಗಡೆಗೊಳಿಸಿದರು.ಪ್ರಿಯಾ ಇನ್‍ಲ್ಯಾಂಡ್ ಫಿಶರೀಸ್ ಆ್ಯಂಡ್ ಬೋಟ್ಸ್ ಸ್ಪೋಟ್ಸ್ ಮಾಲಕ ಡಾ. ನಝೀರ್ ಎಂಎಸ್ ಪ್ರತಿವರ್ಷದಂತೆ ಈ ವರ್ಷವೂ ಇಲ್ಲಿನ ಲೇಕ್ ಮೀನುಗಾರಿಕೆ, ಮಾರಾಟ, ಪ್ರದರ್ಶನದ ಮೇಲುಸ್ತುವಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಪಿಲಿಕುಳ ಸರೋವರಕ್ಕೆ ಮೀನುಗಾರಿಕಾ ಇಲಾಖೆ ವತಿಯಿಂದ 15,000 ಹಾಗೂ ಪಣಂಬೂರು ಬೀಚ್ ಪ್ರವಾಸೋದ್ಯಮ ಪ್ರಾಜೆಕ್ಟ್ ಸಿಇಒ ಯತೀಶ್ ಬೈಕಂಪಾಡಿ ಸಂಸ್ಥೆ ವತಿಯಿಂದ 10,000 ಮರಿ ಮೀನುಗಳನ್ನು ಬಿಡಲಾಯಿತು.
ವೇದಿಕೆಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್, ಮೀನುಗಾರಿಕಾ ಮೇಲ್ವಿಚಾರಕ ಬಸವರಾಜ್, ಪಿಲಿಕುಳ ಕಾರ್ಯನಿರ್ವಹಣಾ ನಿರ್ದೇಶಕಿ ಮೇಘನಾ, ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ದಕ ಜಿಲ್ಲಾ ಘಟಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೀನುಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮೃದುಲಾ ಹಾಗೂ ಡಾ. ರಾಜೇಶ್, ಪೊಲೀಸ್ ಅಧಿಕಾರಿಗಳು ಮತ್ತು ನೂರಾರು ಮಂದಿ ಪಾಲ್ಗೊಂಡಿದ್ದರು. ಪಿಲಿಕುಳ ವಿಜ್ಞಾನ ಕೇಂದ್ರದ ಅಧಿಕಾರಿ ರಾಮಕೃಷ್ಣ ಮರಾಠಿ ಕಾರ್ಯಕ್ರಮ ನಿರೂಪಿಸಿದರು.
*ಕಾಟ್ಲಾ ಮೀನಿನ ರಾಶಿ……..
ಸರೋವರಕ್ಕೆ ಕಳೆದ ರಾತ್ರಿ ಬಲೆ ಹಾಕಲಾಗಿದ್ದು, ಬೆಳಿಗ್ಗಿನಿಂದಲೇ ಮೀನು ಎತ್ತುವ ಪ್ರಕ್ರಿಯೆ ಮುಂದುವರಿಯಿತು. ಬಲೆಗೆ ಬಿದ್ದ ಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಟ್ಲಾ, ರೇವು, ತಿಲೇಪಿಯಾ ಮೀನುಗಳು ಒಳಗೊಂಡಿದ್ದವು. ಉಳಿದಂತೆ ಭಾರೀ ಗಾತ್ರದ `ಮುಗುಡು’ ಮೀನು ಬಲೆಗೆ ಬಿದ್ದಿದ್ದು, ಗ್ರಾಹಕರಿಂದ ಮೀನುಗಳಿಗೆ ಭಾರೀ ಬೇಡಿಕೆ ಕಂಡು ಬಂತು.
ಕ್ರೇಟುಗಳಿಗೆ ಮೀನು ಹಾಕುತ್ತಲೇ ಗ್ರಾಹಕರು ಖರೀದಿಗೆ ಮುಂದಾದರು. ಒಂದೊಂದು ಮೀನು ಸುಮಾರು 20-30 ಕಿಲೋ ಇದ್ದವು. ಒಂದು ಕಿಲೋ ಮೀನಿಗೆ 150ರಿಂದ 200 ರೂ ನಿಗದಿಪಡಿಸಲಾಗಿತ್ತು. ಮೀನು ಮಾರಾಟ ಮತ್ತು ಪ್ರದರ್ಶನದ ಪಕ್ಕದಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ಇತರ ಮೀನುಗಳ ಮಾರಾಟ ವ್ಯವಸ್ಥೆಗೊಳಿಸಲಾಗಿತ್ತು. ಸೇವಿಸಲು ಮೀನು ಖಾದ್ಯ ಲಭ್ಯವಿತ್ತು. 

