ಕೈಕಂಬ :  ಗುರುಪುರ ಗ್ರಾಮ ಪಂಚಾಯತಿನ 2019-20ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶುಕ್ರವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಹಕ್ಕುಪತ್ರಗಳ ಗೊಂದಲ ಮತ್ತು ತಂತಿಗಳಿಗೆ ತಾಗಿಕೊಂಡಿರುವ ಮರ ಕಡಿಯಲು ವಿಳಂಬವಾಗಿರುವ ಬಗ್ಗೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೆದುರು ಅಹವಾಲು ಮಂಡಿಸಿದರು.gur-july-5-asif iqbal-2
ಅಡ್ಡೂರು ಮಸೀದಿ ಹಾಗೂ ಇತರೆಡೆ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರಗಳ ಕೊಂಬೆಗಳನ್ನು ಮಳೆಗಾಲಕ್ಕೆ ಮುಂಚೆ ಕಡಿದು ಹಾಕಬೇಕಿತ್ತು. ಕೆಲವು ಮರಗಳು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ ಎಂದು ಗ್ರಾಮಸ್ಥರು ದೂರಿದರು.
ಇದಕ್ಕುತ್ತರಿಸಿದ ಕೈಕಂಬ ಮೆಸ್ಕಾಂ ಜೆಇ ಮೋಹನ್, “ಅಪಾಯದಲ್ಲಿರುವ ಮರ ಕಡಿದು ಹಾಕಬಹುದು. ಆದರೆ ಎಲ್ಲ ಮರ ಕಡಿಯಲು ಆಗುವುದಿಲ್ಲ. ಅರಣ್ಯ ಇಲಾಖೆ ಆಕ್ಷೇಪವಿರುತ್ತದೆ. ಅಪಾಯದಲ್ಲಿರುವ ಮರ ಕಡಿಯಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು” ಎಂದ ಅವರು, ಕಾಂಜಿಲಕೋಡಿಯಲ್ಲಿ 6.50 ಲಕ್ಷ ರೂ ವಿದ್ಯುತ್ ಯೋಜನೆಯೊಂದಕ್ಕೆ ಸ್ಥಳೀಯರ ಆಕ್ಷೇಪವಿರುವ ಬಗ್ಗೆ ಗ್ರಾಪಂ ಆಡಳಿತದ ಗಮನಹರಿಸಿದರು.

gur-july-5-pdo abubakkar-2
ಸಭೆಯಲ್ಲಿ ಹಕ್ಕುಪತ್ರಗಳ ನಿವೇಶನ ಕುರಿತು ಬಹುತೇಕ ಗಂಭೀರ ಚರ್ಚೆ ನಡೆಯಿತು. ಈಗ ಹಕ್ಕುಪತ್ರ ಹೊಂದಿದವರಿಗೆ ಸರ್ಕಾರ ಎರಡೂ ಮುಕ್ಕಾಲು ಸೆಂಟ್ಸ್ ಜಾಗ ಒದಗಿಸುತ್ತಿದೆ. ಆದರೆ ಹಕ್ಕುಪತ್ರ ಸಿಕ್ಕಿದರೂ ನಿವೇಶನ ಲಭ್ಯವಿಲ್ಲ. ಹಿಂದೆ ಕೆಲವರು ಐದು ಸೆಂಟ್ಸ್ ಬದಲಿಗೆ 10-20 ಸೆಂಟ್ಸ್ ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಅವರಲ್ಲಿರುವ ಹೆಚ್ಚುವರಿ ಜಾಗ ತೆರವುಗೊಳಿಸಿದರೆ, ಪ್ರಸಕ್ತ ಅರ್ಜಿದಾರರಲ್ಲಿ ಒಂದಷ್ಟು ಮಂದಿಗೆ ನಿವೇಶನ ಹಂಚಲು ಸಾಧ್ಯವಿಲ್ಲವೇ ಎಂದು ಕೆಲವರು ಪ್ರಶ್ನಿಸಿದರು.

gur-july-5-mescom je mohan-2
ಇದಕ್ಕುತ್ತರಿಸುತ್ತ ಗೊಂದಲದ ಉತ್ತರ ನೀಡಿದ ಕಂದಾಯ ನಿರೀಕ್ಷಕ(ಆರ್‍ಐ) ಆಸೀಫ್ ಇಕ್ಬಾಲ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಗ ಈ ವಿಷಯದಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ನೀಡಿದರು. ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ನಿರ್ಣಯವೊಂದು ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಆಗ್ನೇಸ್ ಡೊಟ್ಟಿ ಪಿಂಟೋ ಸಭೆಯ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿ ಹೊಂಡ, ಅಲ್ಪ ಆಳದ ಬಾವಿ ಯೋಜನೆ ಕೃಷಿ ಉಪಕರಣಗಳಿಗೆ ಅರ್ಜಿ ನೀಡಬೇಕಾದ ಬಗ್ಗೆ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ಪ್ರಬಂಧಕಿ ಅಶ್ವಿನಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿ ಮಂಜುಳಾ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಸುನೀತಾ ಗಾಂವ್ಕರ್ ತಾಯಿ-ಮಕ್ಕಳು, ಗರ್ಭಿಣಿಯರ ಆರೋಗ್ಯದ ಬಗ್ಗೆ ಇಲಾಖೆಯಲ್ಲಿರುವ ಸವಲತ್ತುಗಳ ಮಾಹಿತಿ ನೀಡಿದರು. ಸಭೆಯಲ್ಲಿ ಶಿಶು ಕಲ್ಯಾಣ ಇಲಾಖೆ ಅಧಿಕಾರಿ, ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು. ಕಾರ್ಯದರ್ಶಿ ನಿತ್ಯಾನಂದ ವಾರ್ಡು ಸಭೆ ಮಾಹಿತಿ ನೀಡಿದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ಈವರೆಗಿನ ಲೆಕ್ಕಪತ್ರ ವಾಚಿಸಿದರು. ಗ್ರಾಪಂ ಲೆಕ್ಕ ಸಹಾಯಕ ಇಸ್ಮಾಯಿಲ್, ಸಿಬ್ಬಂದಿ ತಿಮ್ಮಪ್ಪ, ಇರ್ಶಾದ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *