ಪುಂಜಾಲಕಟ್ಟೆ : ತುಳುನಾಡಿನ ಗರಡಿ ಕ್ಷೇತ್ರಗಳಲ್ಲಿ ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲೊಂದಾಗಿ,ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿರುವ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡಿದ್ದು, ಮೇ 17ರಿಂದ ಬ್ರಹ್ಮ ಕಲಶೋತ್ಸವದ ಸಂಭ್ರಮದಲ್ಲಿದೆ. ಐತಿಹಾಸಿಕ ಹಿನ್ನೆಲೆ: ಕಕ್ಯಪದವು ಗರಡಿ ವಿಶೇಷ ಹಿನ್ನೆಲೆ ಹೊಂದಿದೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಿ ದೈವತ್ವವನ್ನು ಏರಿದ ಅವಳಿ ವೀರಪುರುಷರಾದ ಕೋಟಿ ಚೆನ್ನಯರು ಬಾಳಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಅವರಿಂದಲೇ ಸ್ಥಾಪಿಸಲ್ಪಟ್ಟಿತು ಎನ್ನಲಾದ ತುಳುನಾಡಿನ 66 ಮೂಲ ಗರಡಿಗಳಲ್ಲಿ ಕಕ್ಯಪದವು ಗರಡಿಯೂ ಒಂದು ಎನ್ನುವುದು ಇಲ್ಲಿನ ವಿಶೇಷತೆ. ಕ್ರೀಡಾಪ್ರೇಮಿಗಳಾಗಿದ್ದ ಅವರಿಂದ ಸ್ಥಾಪಿತವಾದ ಕ್ರೀಡಾಮೈದಾನದ ಸ್ವರೂಪದಲ್ಲಿರುವ ಏಕೈಕ ಗರಡಿ ಕ್ಷೇತ್ರ ಎನ್ನುವುದು ಇಲ್ಲಿನ ಹೆಗ್ಗಳಿಕೆ.
ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತಾದಿಗಳ ಆರಾಧನಾಲಯವಾಗಿ ಕಕ್ಯಪದವು ಗರಡಿ ಪ್ರಸಿದ್ಧಿ ಪಡೆದಿದೆ. ಸುತ್ತಮುತ್ತಲಿನ ಊರಿನ ಜನತೆಗೆ ಭಕ್ತಿಭಾವೈಕ್ಯತೆಯ, ಕಾರಣೀಕದ ಪವಿತ್ರ ತಾಣ. ಇಲ್ಲಿನ ಉತ್ಸವಗಳೆಂದರೆ ಊರಿಗೆ ಊರೇ ಹಬ್ಬದ ವಾತಾವರಣ. ಅಪಾರ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಅಗಮಿಸಿ ಶಕ್ತಿಗಳನ್ನು ಪ್ರಾರ್ಥಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡ ಪದ್ಧತಿ. ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ.
ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ, ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ , ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ವಿಶಿಷ್ಠ ವಿನ್ಯಾಸದ ಅತ್ಯಂತ ಅಪರೂಪದ ಕಲಾತ್ಮಕ ತೌಳವ ದ್ರಾವಿಡ ಶೈಲಿಯ ಗರಡಿ ನಿರ್ಮಾಣಗೊಂಡಿದ್ದು, ಪ್ರತಿಷ್ಠೆ, ಬ್ರಹ್ಮಕಲಾಶಾಗಳು ಅರ್ಥಪೂರ್ಣವಾಗಿ, ವೈಭವಪೂರ್ಣವಾಗಿ ನಡೆಸಲು ಸಮಿತಿಯು ತೀರ್ಮಾನಿಸಿದೆ.ವಿಶಾಲ ಬಯಲು ಪ್ರದೇಶ: ಗರಡಿ ಕ್ಷೇತ್ರವು ವಿಶಾಲವಾದ ಬಯಲು ಪ್ರದೇಶವನ್ನು ಹೊಂದಿದ್ದು, ವಿಶಾಲ ಸಭಾಂಗಣ, ಹೊರೆಕಾಣಿಕೆ ಉಗ್ರಾಣ, ಅನ್ನ ಛತ್ರ, ಕಾರ್ಯಾಲಯ, ಅಡಿಗೆ ಹಾಲ್‍ಗಳನ್ನು ನಿರ್ಮಿಸಲಾಗಿದೆ. ಪ್ರತಿದಿನ ಮಧ್ಯಾಹ್ನ, ರಾತ್ರಿ ಭಕ್ತಾಗಳಿಗೆ ಅನ್ನ ಸಂತರ್ಪಣೆಗಾಗಿ ಸುಸಜ್ಜಿತ ಭೋಜನ ಹಾಲ್ ನಿರ್ಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಜಿ.ಪಂ.ಅನುದಾನದಲ್ಲಿ ಶೌಚಾಲಯ, ಸ್ನಾನದ ಕೊಠಡಿ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಸ್ವಯಂ ಸೇವಕರು ಸಿದ್ಧರಾಗಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪುನರ್ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಚಿತ್ತರಂಜನ್ ಕಂಕನಾಡಿ, ರೋ| ರೋಹಿನಾಥ ಪಾದೆ ಸಂಚಾಲಕರಾಗಿ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಕಾರ್ಯಾಧ್ಯಕ್ಷರಾಗಿ, ಕೆ. ಮಾಯಿಲಪ್ಪ ಸಾಲ್ಯಾನ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು, ಜತೆಗೆ ವಿವಿಧ ಸಮಿತಿ ಸದಸ್ಯರು ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
