ಬಂಟ್ವಾಳ: ಕಳೆದ ರಾತ್ರಿಯಿಂದೀಚೆಗೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ನಾಲ್ಕು ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ೫ ಮಂದಿ ಗಾಯಗೊಂಡಿದ್ದಾರೆ.ಬಸ್ಸುಗಳ ಚಾಲಕರಾದ ಪ್ರತಾಪ್ (28), ಶೀನಪ್ಪ (46), ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ಮಕ್ಕಳಾದ ವಾಲಿನ್ ಮರಿಯಾ (15), ಸಾಕ್ಷಿ (7), ಸುಷ್ಮಾ (14) ಗಾಯಾಳುಗಳು.

16-07-24-IMG-20190625-WA0012-768x432

ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗಿನ ವೇಳೆ ಬೇರೆ , ಬೇರೆ ಸಮಯಕ್ಕೆ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಸುಮಾರು 8.45ರ ವೇಳೆಗೆ ಬಿ.ಸಿ.ರೋಡಿನ ಭಂಡಾರಿಬೆಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಧರ್ಮಸ್ಥಳದಿಂದ ಮಂಗಳೂರು ಕಡೆ ಬರುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರ ಪೈಕಿ ಸಹಸವಾರ ಕಲ್ಲೆಸೆದಿದ್ದು, ಬಸ್ಸಿನ ಚಾಲಕನ ಸೀಟಿನ ಎದುರುಭಾಗದ ಗಾಜಿಗೆ ಹಾನಿಯಾಗಿದೆ.

16-07-32-1-4-768x1024ಮಂಗಳವಾರ ಬೆಳಗ್ಗೆ ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ ಸುಮಾರು 8.45ರ ವೇಳೆಗೆ ಪಾಣೆಮಂಗಳೂರು ಸಮೀಪ ಮಾಂಡೋವಿ ಶೋರೂಂ ಮುಂಭಾಗ ಚಲಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರ ರಭಸಕ್ಕೆ ಮುಂಭಾಗದ ಗಾಜು ಹುಡಿಯಾಗಿದ್ದು, ಚಾಲಕ ಪ್ರತಾಪ್ (28) ಗಾಯಗೊಂಡಿದ್ದಾರೆ. ಮೇಲ್ಕಾರ್ ಕಡೆಯಿಂದ ಬೈಕಿನಲ್ಲಿ ಬಂದ ಇಬ್ಬರು ಕಲ್ಲೆಸೆದಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆ ಬಾಳ್ತಿಲ ಕುದ್ರೆಬೆಟ್ಟಿನಲ್ಲಿ ಸಾಗುತ್ತಿದ್ದ ಬಸ್ ಗೆ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಕಲ್ಲೆಸೆದಿದ್ದಾರೆ.

16-07-41-IMG-20190625-WA0015-696x928ಈ ಪ್ರಕರಣದಲ್ಲಿ ಚಾಲಕ ಶೀನಪ್ಪ (46), ಪ್ರಯಾಣಿಕರಾದ ಶಾಲಾ ವಿದ್ಯಾರ್ಥಿಗಳೂ ಆಗಿರುವ ವಾಲಿನ್ ಮರಿಯಾ (15), ಸಾಕ್ಷಿ (7) ಮತ್ತು ಸುಷ್ಮಾ (14) ಗಾಯಗೊಂಡಿದ್ದಾರೆ. ಸಮೀಪದ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ. ಈ ಮೂರು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದ್ದು, ಎಸ್.ಐ. ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಶಂಭೂರು ಶೇಡಿಗುರಿ ಸಮೀಪ ಮಂಗಳವಾರ ಬೆಳಗಿನ ಜಾವ ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲೆಸೆಯಲಾಗಿದೆ. ಇದೂ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ ಎಂದು ದೂರಲಾಗಿದೆ.ಹಾಗೆಯೇ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲು 4 ಬಸ್ ಗಳಿಗೆ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ 2 ಬಸ್ ಗಳಿಗೆ ಕಲ್ಲೆಸೆದ ಪ್ರಕರಣ ದಾಖಲಾಗಿದೆ.

ಈ ಎಲ್ಲ ಘಟನೆಗೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲ. ಕಿಡಿಗೇಡಿಗಳು ಶಾಂತಿ ಕದಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದ್ದು,ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಎಸ್ಪಿ ಸೈದುಲು ಅಡಾವತ್ ನೇತೃತ್ವದಲ್ಲಿ ಸರ್ಕಲ್ ಇನ್ಸಪೆಕ್ಟರ್ ನಾಗರಾಜ್, ಎಸ್ಸೈ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ. ದ.ಕ ಹೆಚ್ಚುವರಿ ಎಸ್ಪಿ ವಿಕ್ರಂ ಬಂಟ್ವಾಳ ಠಾಣೆಯಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆಯಲ್ಲದೆ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದು, ಘಟನೆಗೆ ಸಂಬಂಧಿಸಿ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಿವಿಗೊಡದಿರಿ: ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗಬಾರದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರುವ ಇಲ್ಲ ಸಲ್ಲದ ಸಂದೇಶಗಳಿಗೆ ಕಿವಿಕೊಡದಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾಕ್ರಮವಾಗಿ ಹೆಚ್ಚುವರಿ ಅಧಿಕಾರಿ ಹಾಗೂ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ .

By suddi9

Leave a Reply

Your email address will not be published. Required fields are marked *