ಬಂಟ್ವಾಳ: ಇದೇ ಮೊದಲಿಗೆ ಪುರಸಭಾ ವ್ಯಾಪ್ತಿಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಎಂಆರ್ಪಿಎಲ್ ಸರಪಾಡಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ನೀರಿನ ಲಭ್ಯತೆ ಹಾಗೂ ಅದನ್ನು ಕೆಳಭಾಗಕ್ಕೆ ಹರಿಸುವ ಕುರಿತು ಅಽಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮಂಗಳೂರು ಹಾಗೂ ಬಂಟ್ವಾಳದ ಜನರಿಗೆ ನೀರಿನ ಅಭಾವವನ್ನು ತಪ್ಪಿಸುವ ದೃಷ್ಟಿಯಿಂದ ನೀರು ಹರಿಸುವ ಕುರಿತು ಕೈಗೊಂಡಿರುವ ಕ್ರಮಗಳನ್ನು ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯ್ಕ್ ಅವರಿಗೆ ವಿವರಿಸಲಾಯಿತು. ಅಣೆಕಟ್ಟು ಪ್ರದೇಶ ಹಾಗೂ ಅಲಲ್ಲಿ ಹೊಂಡಗಳಲ್ಲಿ ಮರಳಿನ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸುವ ಕುರಿತು ಕ್ರಮಕೈಗೊಳ್ಳುವಂತೆ ಸಹಾಯಕ ಕಮಿಷನರ್ ಗೆ ಶಾಸಕರು ಸೂಚಿಸಿದರು.

ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾದ ಪರಿಣಾಮ ಕುಮಾರಧಾರ ನದಿಯ ಮೂಲಕ ನೀರಿನ ಹರಿವು ಕೊಂಚ ಆರಂಭಗೊಂಡಿದ್ದು, ಆದರೆ ಅದು ಎಂಆರ್ಪಿಎಲ್ ಡ್ಯಾಂನಲ್ಲಿ ಶೇಖರಣೆ ಗೊಂಡಿದ್ದರಿಂದ ಅಲ್ಲಿನ ಮರಳನ್ನು ಡ್ರಜ್ಜಿಂಗ್ ಯಂತ್ರದ ಮೂಲಕ ತೆರವುಗೊಳಿಸುವ ಕಾಮಗಾರಿಯನ್ನು ಶಾಸಕರು ಹಾಗೂ ಅಧಿಕಾರಿಗಳ ತಂಡ ವೀಕ್ಷಣೆ ನಡೆಸಿತು.

ಬಂಟ್ವಾಳದ ಜನತೆಯ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸ್ತುತ ಒಂದಷ್ಟು ದಿನಗಳ ಕಾಲ ಮಳೆ ಬರದಿದ್ದರೂ, ನದಿಯಲ್ಲಿ ಲಭ್ಯವಿರುವ ನೀರನ್ನೇ ಉಪಯೋಗಿಸಿಕೊಂಡು ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಳಿಕ ಶಾಸಕರು, ಅಧಿಕಾರಿಗಳ ತಂಡ ಬಂಟ್ವಾಳ ಜಕ್ರಿಬೆಟ್ಟು ಕುಡಿಯುವ ನೀರಿನ ರೇಚಕ ಸ್ಥಾವಾರಕ್ಕು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ, ಪವನ್ಕುಮಾರ್ ಶೆಟ್ಟಿ, ಮಂಜು ಮೊದಲಾದವರು ಉಪಸ್ಥಿತರಿದ್ದರು.

