ಬಂಟ್ವಾಳ: ; ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವದ ನೆಪದಲ್ಲಿ ತಾಲೂಕಿನ ಬಡಕಬೈಲು ಎಂಬಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಚಿವ ರಮಾನಾಥ ರೈ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಆರೋಪಿಯಲ್ಲೊಬ್ಬ ಕುಂಬ್ಳೆಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿದ್ದು,
ಪೊಲೀಸರು ಯಾವುದೇ ಚುನಾಯಿತ ಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಯಾವುದೇ ಪ್ರಭಾವಕ್ಕೆ ಮಣಿಯದೆ ಪೋಲೀಸರು ನಿಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು. ಇದುವರೆಗೆ ಈ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ಅಭಿನಂದಿಸುತ್ತೇನೆ ಎಂದರು.
ಬಡಕಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಯಂಗಳಕ್ಕೆ ಬಂದು ಪಟಾಕಿ ಸಿಡಿಸಿ ಅವರನ್ನು ನಿಂದಿಸಲಾಗಿದೆ. ಈ ವಿಚಾರದಲ್ಲೂ ಪೊಲೀಸರು ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕಿದ್ದು, ಬಂಟ್ವಾಳ ಎಎಸ್ಪಿ ಅವರಿಗೆ ಪ್ರಕರಣದ ಕುರಿತು ವಿವರಿಸಿದ್ದೇನೆ ಎಂದರು.
ಹಿಂದೆ ನಡೆದ ಗಲಭೆ,ಕೊಲೆ ಪ್ರಕರಣಗಳಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು,. ಬದಲಾಗಿ ಮತೀಯವಾದಿ ಸಂಘಟನೆಗಳು ಹಾಗು ಇವನ್ನು ಪೋಷಿಸುವ ರಾಷ್ಟ್ರೀಯ ಪಕ್ಷಗಳು ಕಾರಣ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ನನ್ನ ಬಗ್ಗೆ ಅಪಪ್ರಚಾರಗಳು ನಡದಿವೆ. ಕಲ್ಲಡ್ಕ ಶಾಲೆಗೆ ಅಕ್ಕಿ ಬರುವುದನ್ನು ನಾನು ನಿಲ್ಲಿಸಿಲ್ಲ, ಅದಕ್ಕೆ ಬರುವ ಹಣವನ್ನು ನಿಲ್ಲಿಸಿದ್ದೇನೆ , ದೇವರ ದುಡ್ಡು ದುರುಪಯೋಗ ಆಗಬಾರದು ಎಂಬುದೇ ನನ್ನಯೋಚನೆಯಾಗಿತ್ತು. ಆದರೆ ಅಪಪ್ರಚಾರ ಮಾಡಲಾಯಿತು ಎಂದ ರೈ, ಕಳೆದ ಒಂದು ವರ್ಷದಲ್ಲಿ ಶಾಂತಿ ನೆಲೆಸಿದೆ ಎಂದು ಬಿಜೆಪಿಯವರು ಸಂದೇಶಗಳನ್ನು ಹರಡುತ್ತಿದ್ದಾರೆ, ಶಾಂತಿ ಕದಡಿದವರು ನಾವಲ್ಲ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು
