ಪೊಳಲಿ: ದೇಹದ ಆರೋಗ್ಯ-ಅನಾರೋಗ್ಯ ನಮ್ಮ ಕೈಯಲ್ಲೇ ಇದೆ. ನಾವು ತಿನ್ನುವ ಆಹಾರ ಪದ್ಧತಿಯಲ್ಲಿ ಆರೋಗ್ಯ ಅಡಗಿದೆ. ಹಿಂದೆ ನಮ್ಮಲ್ಲಿದ್ದ ಕಷಾಯ ಈಗ ಎಲ್ಲಿದೆ ಮತ್ತು ಯಾರಿಗೆ ಪಥ್ಯವಾಗುತ್ತದೆ ? ಈಗ ಕಷಾಯದ ಸ್ಥಾನವನ್ನು ಪಾಶ್ಚಿಮಾತ್ಯ ಚಾ-ಕಾಫಿ ಆಕ್ರಮಿಸಿದೆ. ಈಗ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮನಸ್ಸಿನ ನೆಮ್ಮದಿ ಕಳೆದುಕೊಂಡಿದ್ದಾರೆ. ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮೇಲೆ ನಿಯಂತ್ರಣದಿಂದ ಆರೋಗ್ಯ ಮೇಲೆ ಹಿಡಿತ ಸಾಧಿಸಬಹುದೆಂದು ಆಕ್ಯುಪ್ರಶರ್ ಮತ್ತು ಸುಜೋಕ್ ಚಿಕಿತ್ಸಕ ಡಾ. ಪಿ ಸುಬ್ರಹ್ಮಣ್ಯ ಭಟ್ ಮಿತ್ತೂರು ಹೇಳಿದರು.
ಅವರು ಪೊಳಲಿಯ ರಾಮಕೃಷ್ಣ ತಪೋವನ ಆಶ್ರಿತ ಹಸಿರು ಪ್ರಕೃತಿ ಆಶ್ರಯದಲ್ಲಿ ಭಾನುವಾರ ಪೊಳಲಿಯ ತಪೋವನದಲ್ಲಿ ಆಯೋಜಿಸಲಾದ ಆಕ್ಯುಪ್ರಶರ್ ಮತ್ತು ಸುಜೋಕ್ ಚಿಕಿತ್ಸಾ ಶಿಬಿರದಲ್ಲಿ ಡಾ. ಭಟ್ ಮಾಹಿತಿ, ಸಲಹೆ ಚಿಕಿತ್ಸೆ ನೀಡಿದರು.
ಶಿಬಿರದಲ್ಲಿ ಡಯಾಬಿಟಿಸ್, ಸ್ಪಾಂಡಿಲೈಟಿಸ್, ವಾತ ಸಮಸ್ಯೆ, ಮಂಡಿನೋವು, ಗಂಟುನೋವು ಸಮಸ್ಯೆ, ಬಿಪಿ, ಮೈಗ್ರೇನ್, ಗ್ಯಾಸ್ ಟ್ರಬಲ್ ಮತ್ತು ಇತರ ವ್ಯಾಧಿ ಸಮಸ್ಯೆಗಳಿಗೆ ವೈದ್ಯರು ಪರೀಕ್ಷಿಸಿ ಸೂಕ್ತ ಪರಿಹಾರ ಸೂಚಿಸಿದರು. ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅಧ್ಯಕ್ಷತೆ ವಹಿಸಿದ್ದ ಶಿಬಿರದಲ್ಲಿ ಮುಂಜಳಾ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರ ನಡೆಸಿಕೊಟ್ಟ ಡಾ. ಭಟ್ ಮತ್ತು ಅವರ ಸಿಬ್ಬಂದಿ ವರ್ಗದಿಂದ ಹಲವರು ಪ್ರಯೋಜನ ಪಡೆದರು.
