ಸುದ್ದಿ9:ಮೂಡುಬಿದರೆ: ಐಸ್ಕ್ರೀಂ ಆಮಿಷವೊಡ್ಡಿ ಶಾಲಾ ಬಾಲಕಿಯ ಮಾನಭಂಗಕ್ಕೆ ಐಸ್ಕ್ರೀಂ ವ್ಯಾಪಾರಿಯನ್ನು ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಪುಚ್ಚೆಮೊಗರಿನ ಫಾರೂಕ್(26)ಎಂದು ತಿಳಿದುಬಂದಿದೆ. ವಿವಾಹಿತನಾಗಿರುವ ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಈತ ಬಂಟ್ವಾಳದ ಶೆಟ್ಟಿ ಐಸ್ಕ್ರೀಂನ್ನು ರಿಕ್ಷಾ ಟೆಂಪೊದಲ್ಲಿ ಲೈನ್ಸೇಲ್ ಮಾಡುತ್ತಿದ್ದ. ಕಾರ್ಕಳ ಶಿರ್ಲಾಲಿನ ಶೇಖರ್ ಎಂಬವರ 12 ವರ್ಷದ ಮಗಳು ಇಲ್ಲಿನ ಪ್ರಾಂತ್ಯ ಶಾಲೆಯ ವಿದ್ಯಾರ್ಥಿನಿ, ತನ್ನ ಅಜ್ಜ ಬಿರಾವು ಕಕ್ಕಿಬೆಟ್ಟು ಬಾಬು ನಲ್ಕೆ ಎಂಬವರ ಮನೆಯಲ್ಲಿ ಉಳಿದುಕೊಂಡಿದ್ದಳು. ಆಕೆ ಭಾನುವಾರ ಬೆಳಿಗ್ಗೆ ಬಿರಾವು ಬಳಿಯ ಅಂಗಡಿಯೊಂದರಿಂದ ಸಾಮಾನು ಖರೀದಿಸಿ ವಾಪಾಸು ಮನೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾ ಟೆಂಪೊದಲ್ಲಿ ಐಸ್ಕ್ರೀಂ ಮಾರಾಟ ಮಾಡಿಕೊಂಡು ಬರುತ್ತಿದ್ದ ಫಾರೂಕ್ ಎಂಬಾತ ಈಕೆಯ ಬಳಿ ಗಾಡಿ ನಿಲ್ಲಿಸಿ ‘ಐಸ್ಕ್ರೀಂ ಕೊಡುತ್ತೇನೆ ಗಾಡಿಯಲ್ಲಿ ಬಾ’ ಎಂದು ಕರೆದನೆನ್ನಲಾಗಿದೆ. ಇದಕ್ಕೆ ಬಾಲಕಿ ಆಕ್ಷೇಪಿಸಿ ಮುಂದೆ ಹೋದಾಗ ಗಾಡಿಯನ್ನು ಆಕೆಗೆ ಅಡ್ಡ ನಿಲ್ಲಿಸಿ ಆರೋಪಿ ಬಾಲಕಿಯ ಎದೆ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದನೆನ್ನಲಾಗಿದೆ.
ಘಟನೆಯಿಂದ ಹೆದರಿದ ಬಾಲಕಿ ಬೊಬ್ಬಿಟ್ಟುಕೊಂಡು ಓಡಿದಾಗ ಗುಡ್ಡೆಗೆ ದನ ಹೊಡೆದುಕೊಂಡು ಹೋಗುತ್ತಿದ್ದ ಅಜ್ಜ ಎದುರಾದರು. ಇದನ್ನು ಕಂಡು ಆರೋಪಿ ಅಲ್ಲಿಂದ ಪರಾರಿಯಾದನೆನ್ನಲಾಗಿದೆ. ಆರೋಪಿ ವಿರುದ್ಧ ಮೂಡುಬಿದರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಣಂಬೂರು ಎಸಿಪಿ ರವಿಕುಮಾರ್ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

